ADVERTISEMENT

‘ಕುಸುಮಬಾಲೆ’ಗೆ ಭಾಷಾಂತರ ಪ್ರಶಸ್ತಿ ಗರಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 19:45 IST
Last Updated 25 ಫೆಬ್ರುವರಿ 2020, 19:45 IST

ನವದೆಹಲಿ: ಇಂಗ್ಲಿಷ್‌ಗೆ ಭಾಷಾಂತರವಾಗಿರುವ, ಸಾಹಿತಿ ದೇವನೂರ ಮಹಾದೇವ ಅವರ ಕೃತಿ ‘ಕುಸುಮಬಾಲೆ’ ಕೇಂದ್ರ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಭಾಷಾಂತರ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಸುಸಾನ್‌ ಡೇನಿಯೆಲ್‌ ಅವರು ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ರಾಜಸ್ಥಾನಿ ಭಾಷೆಗೆ ಅನುವಾದಗೊಂಡಿರುವ ಹಂ.ಪ.ನಾಗರಾಜಯ್ಯ ರಚಿಸಿರುವ ‘ಚಾರು–ವಸಂತ’ ಕಾವ್ಯವೂ ಪ್ರಶಸ್ತಿಗೆ ಆಯ್ಕೆಯಾಗಿದೆ. ದೇವ್‌ ಕೊಠಾರಿ ಈ ಕೃತಿಯನ್ನು ಅನುವಾದಿಸಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದ, ಕನ್ನಡಕ್ಕೆ ಅನುವಾದಗೊಂಡಿರುವ ಕೃತಿಗಳ ವಿವರವನ್ನು ನಂತರ ಪ್ರಕಟಿಸಲಾಗುವುದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.

ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆ, ಒಟ್ಟು 23 ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. 2013ರ ಜನವರಿ 1ರಿಂದ 2017ರ ಡಿಸೆಂಬರ್‌ 31ರ ವರೆಗೆ ಪ್ರಕಟಗೊಂಡಿರುವ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಪ್ರಶಸ್ತಿಯು ₹ 50 ಸಾವಿರ ನಗದು, ತಾಮ್ರ ಫಲಕವನ್ನು ಒಳಗೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.