ನಿತೇಶ್ ರಾಣೆ ಮತ್ತು ಸೈಫ್ ಅಲಿ ಖಾನ್
ಪುಣೆ: ಚಾಕು ಇರಿತದಿಂದ ಚೇತರಿಸಿಕೊಂಡು ಐದು ದಿನಗಳ ಬಳಿಕ ಆಸ್ಪತ್ರೆಯಿಂದ ಮನೆಗೆ ವಾಪಾಸ್ಸಾಗಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ವಿರುದ್ಧ ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವರೂ ಆಗಿರುವ ಬಿಜೆಪಿ ನಾಯಕ ನಿತೇಶ್ ರಾಣೆ ವಾಗ್ಧಾಳಿ ನಡೆಸಿದ್ದಾರೆ.
‘ಬಹುಶಃ ಅವನು(ಚಾಕು ಇರಿದ ಆರೋಪಿ) ಅವರನ್ನು (ಸೈಫ್) ಕರೆದುಕೊಂಡು ಹೋಗಲು ಬಂದಿರಬಹುದು. ಇದು ಒಳ್ಳೆಯದೇ.. ಕಸವನ್ನು ಎಸೆಯಬೇಕು’ ಎಂದು ರಾಣೆ ಹೇಳಿದ್ದಾರೆ. ಈ ಕುರಿತ ವಿಡಿಯೊವನ್ನು ಸುದ್ದಿಸಂಸ್ಥೆ ಎಎನ್‌ಐ ಹಂಚಿಕೊಂಡಿದೆ.
‘ಮುಂಬೈನಲ್ಲಿ ಬಾಂಗ್ಲಾದೇಶಿಗಳು ಏನು ಮಾಡುತ್ತಿದ್ದಾರೆ ನೋಡಿ. ಅವರು ಸೈಫ್ ಅಲಿ ಖಾನ್ ಅವರ ಮನೆಗೆ ನುಗ್ಗಿದ್ದಾರೆ. ಮೊದಲು ರಸ್ತೆಯ ಕ್ರಾಸಿಂಗ್‌ಗಳಲ್ಲಿ ನಿಲ್ಲುತ್ತಿದ್ದ ಅವರು ಈಗ ಮನೆಗಳಿಗೆ ಪ್ರವೇಶಿಸಲು ಪ್ರಾರಂಭಿಸಿದ್ದಾರೆ’ ಎಂದು ರಾಣೆ ಹೇಳಿದ್ದಾರೆ.
‘ಅವರು(ಸೈಫ್) ಆಸ್ಪತ್ರೆಯಿಂದ ಹೊರಗೆ ಬರುವುದನ್ನು ನೋಡಿದರೆ ಅವರಿಗೆ ನಿಜವಾಗಿಯೂ ಚಾಕುವಿನಿಂದ ಗಾಯವಾಗಿದೆಯಾ? ಅಥವಾ ನಟಿಸುತ್ತಿದ್ದಾರಾ? ಎಂಬ ಅನುಮಾನ ಬಂತು. ನಡೆಯುವಾಗ ಅವರು ನೃತ್ಯ ಮಾಡುತ್ತಿದ್ದರು’ ಎಂದು ಅನುಮಾನ ಹೊರಹಾಕಿದ್ದಾರೆ.
‘ಶಾರುಖ್ ಖಾನ್, ಸೈಫ್ ಅಲಿ ಖಾನ್ ಅವರಂತಹ ‘ಖಾನ್’ಗಳು ಗಾಯಗೊಂಡಾಗ ಎಲ್ಲರೂ ಅದರ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ಅವರಂತಹ ಹಿಂದೂ ನಟ ಚಿತ್ರಹಿಂಸೆಗೊಳಗಾದಾಗ ಯಾರೂ ಏನನ್ನೂ ಹೇಳಲು ಮುಂದೆ ಬರುವುದಿಲ್ಲ’ ಎಂದು ಕಿಡಿಕಾರಿದ್ದಾರೆ.
‘ಹಿಂದೂ ಕಲಾವಿದರ ಬಗ್ಗೆ ಆ ಮುಂಬ್ರಾದ ಜೀತುದ್ದೀನ್ (ಜಿತೇಂದ್ರ ಅವ್ಹಾದ್), ಬಾರಾಮತಿಯ ತಾಯಿ (ಸುಪ್ರಿಯಾ ಸುಳೆ) ಎಂದಾದರೂ ಚಿಂತಿಸುವುದನ್ನು ನೋಡಿದ್ದೀರಾ?...ಅವರಿಗೆ ಸೈಫ್ ಅಲಿ ಖಾನ್, ಶಾರುಖ್ ಖಾನ್ ಮಗ ಮತ್ತು ನವಾಬ್ ಮಲಿಕ್ ಬಗ್ಗೆ ಮಾತ್ರ ಚಿಂತೆಯಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಹಿಂದೂಗಳು ಗಮನಹರಿಸಬೇಕು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.