ADVERTISEMENT

ನಟ ಸೈಫ್‌ ಅಲಿ ಖಾನ್‌ಗೆ ಹೀಗಾದರೆ ಸಾಮಾನ್ಯ ಜನರ ಗತಿಯೇನು? ಎಂವಿಎ

ಮೃತ್ಯುಂಜಯ ಬೋಸ್
Published 16 ಜನವರಿ 2025, 9:36 IST
Last Updated 16 ಜನವರಿ 2025, 9:36 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್‌ ಅವರ ಮೇಲಿನ ದಾಳಿ ವಿಚಾರವಾಗಿ ದೇವೆಂದ್ರ ಫಡಣವೀಸ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷ ಮಹಾ ವಿಕಾಸ್ ಆಘಾಡಿ, ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದಿದೆ.

ಈ ವೇಳೆ ಬೀಡ್ ಮತ್ತು ಪರ್ಭಾನಿ ಪ್ರಕರಣವನ್ನು ಉಲ್ಲೇಖಿಸಿರುವ ವಿಪಕ್ಷ ನಾಯಕರು, ಪರ್ಭಾನಿ ಹಿಂಸಾಚಾರ ಪ್ರಕರಣದಲ್ಲಿ ಬಂಧನವಾಗಿದ್ದ ದಲಿತ ಸಮುದಾಯಕ್ಕೆ ಸೇರಿದ ಕಾನೂನು ವಿದ್ಯಾರ್ಥಿ ಸೋಮನಾಥ್ ಸೂರ್ಯವಂಶಿ ಪೊಲೀಸ್ ವಶದಲ್ಲಿದ್ದಾಗಲೇ ಮೃತಪಟ್ಟಿದ್ದಾರೆ. ಬೀಡ್‌ ಜಿಲ್ಲೆಯ ಸರಪಂಚ್ ಸಂತೋಷ್‌ ದೇಶಮುಖ್‌ ಅವರನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ. ಎಸ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಅವರನ್ನು ಹತ್ಯೆ ಮಾಡಲಾಗಿದೆ. ಬಾಲಿವುಡ್ ನಟ ಸಲ್ಮಾನ್‌ ಖಾನ್ ಅವರಿಗೆ ನಿರಂತರ ಜೀವ ಬೆದರಿಕೆ ಸಂದೇಶಗಳು ಬರುತ್ತಿವೆ’ ಎಂದು ಗೃಹ ಸಚಿವರೂ ಆಗಿರುವ ಫಡಣವೀಸ್ ಅವರ ವಿರುದ್ಧ ಹರಿಹಾಯ್ದಿದ್ದಾರೆ.

‘ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಸೈಫ್‌ ಅಲಿ ಖಾನ್ ಅವರ ಮೇಲಿನ ದಾಳಿಯು ಮುಂಬೈ ಪೊಲೀಸರು ಮತ್ತು ಗೃಹ ಸಚಿವರ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ. ಪ್ರಮುಖ ವ್ಯಕ್ತಿಗಳ ಮೇಲೆ ದಾಳಿ ಮಾಡುವ ಮೂಲಕ ಮುಂಬೈಯನ್ನು ದುರ್ಬಲಗೊಳಿಸುವ ಯತ್ನ ನಡೆಯುತ್ತಿದೆ’ ಎಂದು ಶಿವಸೇನಾ(ಯುಬಿಟಿ) ಸಂಸದ ಸಂಜಯ್ ರಾವುತ್ ಅವರು ಹೇಳಿದ್ದಾರೆ.

ADVERTISEMENT

‘ಎಲ್ಲ ರೀತಿಯ ಭದ್ರತೆ ಹೊಂದಿರುವ ಸೈಫ್‌ ಅಲಿ ಖಾನ್‌ನಂತವರ ಮನೆ ಮೇಲೆಯೇ ದಾಳಿ ನಡೆಯುತ್ತದೆ ಎಂದರೆ ಸಾಮಾನ್ಯ ಜನರ ಗತಿಯೇನು? ಕಳೆದೆರಡು ವರ್ಷದಿಂದ ನಡೆಯುತ್ತಿರುವ ಘಟನೆಗಳಿಂದ ಮಹಾರಾಷ್ಟ್ರದಲ್ಲಿ ಕಾನೂನಿನ ಮೇಲಿನ ಭಯ ಕಡಿಮೆಯಾಗಿದೆ’ ಎಂದು ಎನ್‌ಸಿಪಿ(ಎಸ್‌ಪಿ) ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಆತಂಕ ವ್ಯಕ್ತಪಡಿಸಿದ್ದಾರೆ.

‘ಎಂತಹ ಭಯಾನಕ ಘಟನೆಯಿದು. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿಯುತ್ತಿದೆ. ಬಾಂದ್ರದಲ್ಲಿ ಬಾಬಾ ಸಿದ್ದೀಕಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸಲ್ಮಾನ್ ಖಾನ್ ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಲಾಯಿತು. ಇದೀಗ ಸೈಫ್‌ ಅಲಿ ಖಾನ್ ಅವರ ಮೇಲೆ ಚಾಕುವಿನಿಂದ ದಾಳಿ ಮಾಡಲಾಗಿದೆ. ಇಂತಹ ಜನಪ್ರಿಯ ವ್ಯಕ್ತಿಗಳಿಗೆ ಸುರಕ್ಷತೆ ಇಲ್ಲ ಎಂದರೆ ಸಾಮಾನ್ಯ ಜನರು ಏನು ಮಾಡಬೇಕು’ ಎಂದು ಕಾಂಗ್ರೆಸ್‌ ನಾಯಕಿ ವರ್ಷಾ ಗಾಯಕವಾಡ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.