ADVERTISEMENT

ಸೈಫ್ ಹಲ್ಲೆ ಪ್ರಕರಣ: ಬಂಧಿತ ಬಾಂಗ್ಲಾ ವ್ಯಕ್ತಿಯ ವಿರುದ್ಧ ಸಾಕ್ಷ್ಯಗಳಿವೆ–ಪೊಲೀಸ್

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ಹಲ್ಲೆ ಪ್ರಕರಣ

ಪಿಟಿಐ
Published 28 ಜನವರಿ 2025, 15:45 IST
Last Updated 28 ಜನವರಿ 2025, 15:45 IST
ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್‌ ರೋಹಿಲ್ಲಾ ಅಮೀನ್‌ ಫಕೀರ್‌-ಪಿಟಿಐ ಚಿತ್ರ
ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್‌ ರೋಹಿಲ್ಲಾ ಅಮೀನ್‌ ಫಕೀರ್‌-ಪಿಟಿಐ ಚಿತ್ರ   

ಮುಂಬೈ: ‘ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಬಾಂಗ್ಲಾದೇಶದ ವ್ಯಕ್ತಿಯ ವಿರುದ್ಧ ಬಲವಾದ ಸಾಕಷ್ಟು ಪುರಾವೆಗಳಿವೆ’ ಎಂದು ಮುಂಬೈ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸೈಫ್‌ ಅಲಿಖಾನ್‌ ಅವರು ಇದೇ ಜ.16ರಂದು ಮುಂಬೈನ ಬಾಂದ್ರಾದಲ್ಲಿರುವ ಅವರ ನಿವಾಸದಲ್ಲಿ ಹಲ್ಲೆಗೆ ಒಳಗಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಠಾಣೆ ಜಿಲ್ಲೆಯಲ್ಲಿ ಆರೋಪಿ, ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್‌ ರೋಹಿಲ್ಲಾ ಅಮೀನ್‌ ಫಕೀರ್‌ (30) ಉರುಫ್‌ ವಿಜಯ್‌ ದಾಸ್‌ ಖಾನ್‌ನನ್ನು ಬಂಧಿಸಿದ್ದರು.

ತನಿಖೆಯ ಬೆಳವಣಿಗೆ ಕುರಿತು ಪ‍ತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಂಟಿ ಪೊಲೀಸ್‌ ಆಯುಕ್ತ (ಪಶ್ಚಿಮ ವಿಭಾಗ) ಪರಮ್‌ಜಿತ್‌ ದಹಿಯಾ,‘ಕ್ರೈಂ ಬ್ರಾಂಚ್‌ ತಂಡದ ಜೊತೆಗೂಡಿ ಡಿಸಿಪಿ ವಲಯ –9ರ ತಂಡವು ‘ಅತ್ಯುತ್ತಮ ಪುರಾವೆ ಆಧರಿಸಿಯೇ ಆರೋಪಿಯನ್ನು ಬಂಧಿಸಿದೆ. ಆತನ ವಿರುದ್ಧ ದೈಹಿಕ ಹಾಗೂ ತಂತ್ರಜ್ಞಾನ ಆಧರಿತ ಪ್ರಬಲವಾದ ಸಾ‌ಕ್ಷ್ಯಗಳಿವೆ’ ಎಂದು ವಿವರಿಸಿದರು.

ADVERTISEMENT

ತನಿಖೆ ಕುರಿತಂತೆ ವ್ಯಾಪಕ ಟೀಕೆ– ವ್ಯತಿರಿಕ್ತ ವರದಿಗಳು ಪ್ರಕಟಗೊಂಡಿದ್ದರಿಂದ ಪೊಲೀಸರು ಈ ಸ್ಪಷ್ಟನೆ ನೀಡಿದ್ದಾರೆ.

‘ದಾಳಿಗೆ ಆತನ ಜೊತೆ ಬೇರೆಯವರು ಕೈ ಜೋಡಿಸಿರುವ ಕುರಿತು ಇದುವರೆಗೂ ಪೊಲೀಸರಿಗೆ ಕಂಡುಬಂದಿಲ್ಲ. ಆದರೂ, ಕೃತ್ಯದ ಬಳಿಕ ಆತ ಸಂಪರ್ಕಿಸಿದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಅವರು ವಿವರಿಸಿದರು.

‘ಆರೋಪಿಯ ಬೆರಳಚ್ಚನ್ನು ಸಂಗ್ರಹಿಸಿ ಸಿಐಡಿಗೆ ಕಳುಹಿಸಿಕೊಡಲಾಗಿದೆ. ಈ ಕುರಿತು ಇದುವರೆಗೂ ಯಾವುದೇ ವರದಿ ಕೈ ಸೇರಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. 

ಸಿ.ಎಂ ಸ್ಪಷ್ಟನೆ: ಈ ಕುರಿತಂತೆ ಪ್ರತಿಕ್ರಿಯಿಸಿದ್ದ ಗೃಹ ಖಾತೆ ಹೊಂದಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌,‘ಈ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿದ್ದಾರೆ. ಅವರು ಎಲ್ಲ ಮಾಹಿತಿಗಳನ್ನು ಕಲೆಹಾಕುತ್ತಿದ್ದು, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದ್ದಾರೆ’ ಎಂದು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.