
ಸಂಭಲ್ (ಉತ್ತರ ಪ್ರದೇಶ): ಸಂಭಲ್‌ನ ಸರಾಯ ತರೀನ್ ಪ್ರದೇಶದಲ್ಲಿರುವ ಕೆರೆ ಒತ್ತುವರಿ ಸಂಬಂಧ ಜಿಲ್ಲಾಡಳಿತವು ಮಂಗಳವಾರ ಸಮೀಕ್ಷೆ ಕಾರ್ಯ ಕೈಗೊಂಡಿದೆ.
ಕೆರೆಯು ಸುಮಾರು 3,320 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ಕೆರೆಗೆ ಸೇರಿದ ಜಾಗದಲ್ಲಿ ಸುಮಾರು 40 ಮನೆಗಳನ್ನು ನಿರ್ಮಿಸಲಾಗಿದೆ. ನಾಯಬ್ ತಹಶೀಲ್ದಾರ್ ದೀಪಕ್ ಜುರೇಲ್ ನೇತೃತ್ವದಲ್ಲಿ ಕಂದಾಯ ಇಲಾಖೆಯ 25 ಸದಸ್ಯರ ತಂಡವು ಸಮೀಕ್ಷೆ ಕಾರ್ಯದಲ್ಲಿ ತೊಡಗಿದೆ. ಐದು ಠಾಣೆಗಳ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
‘ಸಮೀಕ್ಷೆ ಪೂರ್ಣಗೊಂಡ ನಂತರ ನಿವಾಸಿಗಳಿಗೆ ನೋಟಿಸ್ ನೀಡಲಾಗುವುದು. ಕಾನೂನು ಪ್ರಕ್ರಿಯೆ ಪೂರ್ಣಗೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ದೀಪಕ್ ಜುರೇಲ್ ತಿಳಿಸಿದ್ದಾರೆ.
ಈ ಸಮೀಕ್ಷೆಯನ್ನು ಸ್ಥಳೀಯರು ವಿರೋಧಿಸಿದ್ದಾರೆ.
‘ಹಳೆಯ ಭೂ ದಾಖಲೆಗಳ ಪ್ರಕಾರ, ಈ ಪ್ರದೇಶವು ಮೌಜಾ ಘುಘಲಿ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ನಮ್ಮ ಪೂರ್ವಜರು ಇಲ್ಲಿ ವಾಸಿಸುತ್ತಿದ್ದರು ಹಾಗೂ ಇಲ್ಲೇ ಮೃತಪಟ್ಟಿದ್ದರು. ನಾವು ಶತಮಾನದಷ್ಟು ಹಳೆಯದಾದ ಮನೆಯಲ್ಲೇ ವಾಸಿಸುತ್ತಿದ್ದೇವೆ’ ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ಇಮ್ರಾನ್ ಖುರೇಷಿ ಹೇಳಿದ್ದಾರೆ.