ADVERTISEMENT

ಉತ್ತರ ಪ್ರದೇಶ | ‘ವಿದ್ಯುತ್‌ ಕಳ್ಳತನ’: ಸಂಭಲ್ ಸಂಸದನಿಗೆ ₹1.91 ಕೋಟಿ ದಂಡ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 14:48 IST
Last Updated 20 ಡಿಸೆಂಬರ್ 2024, 14:48 IST
ಸಂಭಲ್‌ ಸಂಸದ ಜಿಯಾ ಉರ್‌ ರೆಹಮಾನ್‌ (ಎಡ)
ಸಂಭಲ್‌ ಸಂಸದ ಜಿಯಾ ಉರ್‌ ರೆಹಮಾನ್‌ (ಎಡ)   

ಲಖನೌ: ಉತ್ತರ ಪ್ರದೇಶದ ಸಂಭಲ್‌ ಲೋಕಸಭಾ ಕ್ಷೇತ್ರದ ಸಂಸದ, ಸಮಾಜವಾದಿ ಪಕ್ಷದ ಜಿಯಾ ಉರ್‌ ರೆಹಮಾನ್‌ ಬರ್ಕ್ ಅವರಿಗೆ ವಿದ್ಯುತ್‌ ಇಲಾಖೆಯು ಶುಕ್ರವಾರ ₹1.91 ಕೋಟಿ ದಂಡ ವಿಧಿಸಿದೆ. ಅವರ ಮನೆಯ ವಿದ್ಯುತ್ ಸಂಪರ್ಕವನ್ನೂ ಸ್ಥಗಿತಗೊಳಿಸಿದೆ. 

ವಿದ್ಯುತ್‌ ಇಲಾಖೆಯ ಸಿಬ್ಬಂದಿ ಎರಡು ದಿನಗಳ ಹಿಂದೆ ಜಿಯಾ ಉರ್‌ ರೆಹಮಾನ್‌ ಅವರ ಮನೆಯಲ್ಲಿ ಶೋಧ ನಡೆಸಿ, ಮೀಟರ್‌ ಇಲ್ಲದ ವಿದ್ಯುತ್‌ ಸಂಪರ್ಕಗಳನ್ನು ಪತ್ತೆ ಮಾಡಿದ್ದರು. 

‘ಅವರ ಮನೆಯ ವಿದ್ಯುತ್‌ ಬಿಲ್‌ ಹಲವು ತಿಂಗಳುಗಳಿಂದ ಶೂನ್ಯ ಎಂದು ತೋರಿಸುತ್ತಿತ್ತು. ಮನೆಯ ಎರಡು ಸಂಪರ್ಕಗಳಿಗೆ ಒಂದು ವರ್ಷದಲ್ಲಿ ಕೇವಲ ₹14 ಸಾವಿರ ಬಿಲ್‌ ಮಾತ್ರ ಬಂದಿದೆ’ ಎಂದು ವಿದ್ಯುತ್ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ತಂದೆ ವಿರುದ್ಧ ಪ್ರಕರಣ: ವಿದ್ಯುತ್ ಇಲಾಖೆಯ ಸಿಬ್ಬಂದಿ ಶೋಧ ನಡೆಸಲು ಮನೆಗೆ ಬಂದಾಗ ಸಂಸದರ ತಂದೆ ಹಾಗೂ ಇತರ ಇಬ್ಬರು ಅವರಿಗೆ ಅಡ್ಡಿಪಡಿಸಿದ್ದಾರೆ. ಮಾತ್ರವಲ್ಲ, ‘ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಬೆದರಿಕೆಯನ್ನೂ ಹಾಕಿದ್ದಾರೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಒತ್ತುವರಿ ತೆರವು: ದೀಪಾ ಸರಾಯ್‌ ಪ್ರದೇಶದಲ್ಲಿರುವ ಜಿಯಾ ಉರ್‌ ರೆಹಮಾನ್‌ ಅವರ ಮನೆಯ ಮೆಟ್ಟಿಲುಗಳನ್ನು ಅಧಿಕಾರಿಗಳು ಶುಕ್ರವಾರ ಬುಲ್ಡೋಜರ್‌ ಬಳಸಿ ತೆರವುಗೊಳಿಸಿದರು. ಮೆಟ್ಟಿಲುಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವುದು ಕಂಡುಬಂದ ಕಾರಣ ಜಿಲ್ಲಾಡಳಿತವು ಈ ಕ್ರಮ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.