ADVERTISEMENT

ಸಂಭಲ್ ಹಿಂಸಾಚಾರ: ಸ್ಥಳೀಯರ ಹೇಳಿಕೆ ದಾಖಲಿಸಿದ ತನಿಖಾ ಆಯೋಗ

ಪಿಟಿಐ
Published 28 ಫೆಬ್ರುವರಿ 2025, 11:11 IST
Last Updated 28 ಫೆಬ್ರುವರಿ 2025, 11:11 IST
<div class="paragraphs"><p>ಸಂಭಲ್‌ನ ಶಾಹಿ ಜಾಮಾ ಮಸೀದಿ</p></div>

ಸಂಭಲ್‌ನ ಶಾಹಿ ಜಾಮಾ ಮಸೀದಿ

   

(ಪಿಟಿಐ ಚಿತ್ರ)

ಸಂಭಲ್ (ಉತ್ತರ ಪ್ರದೇಶ): ಮಸೀದಿ ಸಮೀಕ್ಷೆ ವೇಳೆ ಸಂಭಲ್‌ನಲ್ಲಿ ನಡೆದ ಹಿಂಸಾಚಾರದ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಾಂಗ ಆಯೋಗದ ಸದಸ್ಯರು ಶುಕ್ರವಾರ ನಗರಕ್ಕೆ ಭೇಟಿ ನೀಡಿ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರ ಹೇಳಿಕೆಗಳನ್ನು ದಾಖಲಿಸಿಕೊಂಡರು.

ADVERTISEMENT

ಕಳೆದ ವರ್ಷ ನ.24ರಂದು ಶಾಹಿ ಜಾಮಾ ಮಸೀದಿ ಸಮೀಕ್ಷೆ ವೇಳೆ ನಡೆದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಈ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರವು ಡಿ.11ರಂದು ಮೂವರು ಸದಸ್ಯರನ್ನೊಳಗೊಂಡ ನ್ಯಾಯಾಂಗ ಆಯೋಗವನ್ನು ರಚಿಸಿತ್ತು. 

ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಅರೋರ, ನಿವೃತ್ತ ಐಪಿಎಸ್ ಅಧಿಕಾರಿ ಅರವಿಂದ ಕುಮಾರ್ ಜೈನ್ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಅಮಿತ್ ಮೋಹನ್ ಪ್ರಸಾದ್ ಅವರು ಆಯೋಗದ ಸದಸ್ಯರಾಗಿದ್ದಾರೆ. 

ಈ ಹಿಂದೆಯೂ ನಗರಕ್ಕೆ ಭೇಟಿ ನೀಡಿದ್ದ ಆಯೋಗವು ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು. 

ಘಟನೆಯ ಹಿನ್ನೆಲೆ:

ಸಂಭಲ್‌ನ ಶಾಹಿ ಜಾಮಾ ಮಸೀದಿಯಿದ್ದ ಜಾಗದಲ್ಲಿ ಪುರಾತನ ಹಿಂದೂ ದೇವಾಲಯವಿತ್ತು. ಮೊಘಲ್‌ ದೊರೆ ಬಾಬರ್‌ ಆಳ್ವಿಕೆ ಅವಧಿಯಲ್ಲಿ ದೇಗುಲ ಕೆಡವಿ ಮಸೀದಿ ಕಟ್ಟಲಾಗಿದೆ. ದೇಗುಲಕ್ಕೆ ಸೇರಿದ ಅನೇಕ ಗುರುತುಗಳೂ ಅಲ್ಲಿವೆ ಎಂದು ಸುಪ್ರೀಂ ಕೋರ್ಟ್‌ ವಕೀಲ ವಿಷ್ಣು ಶಂಕರ್‌ ಜೈನ್‌ ಅವರು ಸ್ಥಳೀಯ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ವಿಡಿಯೊ ಚಿತ್ರೀಕರಣ ಮತ್ತು ಛಾಯಾಗ್ರಹಣ ಸಮೇತ ಸಮೀಕ್ಷೆ ನಡೆಸಿ, ವರದಿ ಸಲ್ಲಿಸುವಂತೆ ಆದೇಶಿಸಿತ್ತು.

ನ್ಯಾಯಾಲಯದ ಆದೇಶದ ಮೇರೆಗೆ ನವೆಂಬರ್ 24ರಂದು ಸಮೀಕ್ಷೆ ನಡೆಸುತ್ತಿದ್ದ ಸಂದರ್ಭದಲ್ಲಿ, ಮಸೀದಿಯ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ್ದರು. ಬಳಿಕ ಘರ್ಷಣೆ ಹಿಂಸಾರೂಪ ಪಡೆದಿತ್ತು. ಘಟನೆಯಲ್ಲಿ ನಾಲ್ವರು ಸಾವಿಗೀಡಾಗಿ ಹಲವರು ಗಾಯಗೊಂಡಿದ್ದರು.

ಹಿಂಸಾಚಾರ ಕುರಿತು ತನಿಖೆಗಾಗಿ ಮೂವರು ಸದಸ್ಯರು ಇರುವ ನ್ಯಾಯಾಂಗ ಆಯೋಗ ರಚಿಸಿ ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್‌ ಪಟೇಲ್ ನ.28ರಂದು ಆದೇಶಿಸಿದ್ದರು.

ಮಸೀದಿ ಆವರಣ ಸ್ವಚ್ಛಗೊಳಿಸಲು ಅನುಮತಿ
ಉತ್ತರ ಪ್ರದೇಶದ ಸಂಭಲ್‌ನಲ್ಲಿರುವ ಜಾಮಾ ಮಸೀದಿಯ ಆವರಣವನ್ನು ಸ್ವಚ್ಛಗೊಳಿಸುವಂತೆ ಭಾರತೀಯ ‍ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಅಲಹಾಬಾದ್ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ. ಆದರೆ ಮಸೀದಿಗೆ ಬಣ್ಣ ಬಳಿಯಲು ನ್ಯಾಯಾಲಯ ಅನುಮತಿ ನೀಡಿಲ್ಲ. ರಂಜಾನ್‌ ತಿಂಗಳು ಆರಂಭವಾಗಲಿರುವ ಕಾರಣ ಮಸೀದಿಯನ್ನು ಸ್ವಚ್ಛಗೊಳಿಸಲು ಮತ್ತು ಬಣ್ಣ ಬಳಿಯಲು ಅವಕಾಶ ನೀಡುವಂತೆ ಕೋರಿ ಮಸೀದಿಯ ನಿರ್ವಹಣಾ ಸಮಿತಿಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.