
ಜ್ಯೋತಿರಾದಿತ್ಯ ಸಿಂಧಿಯಾ
ನವದೆಹಲಿ: ದೇಶದಲ್ಲಿ ಬಳಸುವ ಎಲ್ಲ ಮೊಬೈಲ್‌ಗಳಲ್ಲಿ ‘ಸಂಚಾರ ಸಾಥಿ’ ಆ್ಯಪ್ ಕಡ್ಡಾಯವಲ್ಲ ಎಂದು ಕೇಂದ್ರ ಸಚಿವ ಜೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಮೊಬೈಲ್ ಬಳಕೆದಾರರೇ ತಮ್ಮ ಕೈಯಿಂದಲೇ ತಮ್ಮನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಇರುವ ಆ್ಯಪ್ ಇದಾಗಿದೆ. ಮೋಸ, ವಂಚನೆ ಮತ್ತು ಮೊಬೈಲ್ ಕಳ್ಳತನದಿಂದ ಬಳಕೆದಾರರಿಗೆ ರಕ್ಷಣೆ ನೀಡಲು ಈ ಆ್ಯಪ್ ಅನ್ನು ಬಳಸಲು ಸೂಚಿಸಲಾಗಿದೆಯೇ ಹೊರತು ನಾವು ಬಳಕೆದಾರರ ಕಾಲ್ ಅನ್ನು ಟ್ರ್ಯಾಕ್ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸರ್ಕಾರವು ಎಲ್ಲ ಫೋನ್‌ಗಳಲ್ಲಿ ಕಡ್ಡಾಯವಾಗಿ ಸಂಚಾರ ಸಾಥಿ ಆ್ಯಪ್ ಅನ್ನು ಪ್ರೀ ಇಸ್ಟಾಲ್ ಮಾಡಿಸಬೇಕು ಎಂಬ ನಿರ್ಧಾರದ ಬಳಿಕ ಖಾಸಗಿತನಕ್ಕೆ ಧಕ್ಕೆ ಬರುವ ಕುರಿತಂತೆ ಬಳಕೆದಾರರಿಂದ ಆತಂಕ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸಚಿವರು ಸ್ಪಷ್ಟನೆ ನೀಡಿದ್ದಾರೆ.
‘ಈ ಅಪ್ಲಿಕೇಶನ್ ಅನ್ನು ಎಲ್ಲರಿಗೂ ಪರಿಚಯಿಸುವುದು ನಮ್ಮ ಕರ್ತವ್ಯ. ಅದನ್ನು ಅವರ ಫೋನ್‌ಗಳಲ್ಲಿ ಇಟ್ಟುಕೊಳ್ಳಬೇಕೋ ಬೇಡವೋ ಅದು ಬಳಕೆದಾರರಿಗೆ ಬಿಟ್ಟದ್ದು’ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
‘ಸಂಚಾರ ಸಾಥಿ ಆ್ಯಪ್ ನಿಮಗೆ ಬೇಡವಾದರೆ, ನೀವು ಅದನ್ನು ಅಳಿಸಬಹುದು. ಅದು ಐಚ್ಛಿಕ’ಎಂದು ಸಿಂಧಿಯಾ ಮಂಗಳವಾರ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಫೋನ್‌ಗಳ ನೈಜತೆಯನ್ನು ಪರಿಶೀಲಿಸಲು ಮತ್ತು ಕಳೆದುಹೋದರೆ ಫೋನ್ ಅನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುವಂತೆ ಸರ್ಕಾರ ಈ ಅಪ್ಲಿಕೇಶನ್ ಅನ್ನು ಪ್ರಸ್ತಾಪಿಸಿದೆ. ಆದರೆ, ಇದನ್ನು ಬಿಗ್ ಬ್ರದರ್ ನಡೆ ಎಂದು ಖಂಡಿಸಿರುವ ವಿರೋಧ ಪಕ್ಷಗಳು, ನಾಗರಿಕರ ಮೇಲೆ ನಿರಂತರ ಕಣ್ಗಾವಲು ಇಡಲು ಇದನ್ನು ಪರಿಚಯಿಸಲಾಗುತ್ತಿದೆ ಎಂದಿವೆ.
ಇದಕ್ಕೂ ಮೊದಲು, ಆಡಳಿತಾರೂಢ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಶಶಾಂಕ್ ಮಣಿ ತ್ರಿಪಾಠಿ ಅವರು ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಮೊಬೈಲ್ ಫೋನ್‌ಗಳಲ್ಲಿ ಮೊದಲೇ ಸ್ಥಾಪಿಸಬೇಕೆಂದು ಕಡ್ಡಾಯಗೊಳಿಸುವ ದೂರಸಂಪರ್ಕ ಇಲಾಖೆಯ(ಡಿಒಟಿ) ಕ್ರಮವನ್ನು ಸಮರ್ಥಿಸಿಕೊಂಡರು. ಇದು ಸುರಕ್ಷತೆಯ ಪ್ರಜ್ಞೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.