ADVERTISEMENT

ದಾಖಲೆಯಿಲ್ಲದ ಮೂಲದ ಹಣ ಬಳಕೆ ಪಿಎಂಎಲ್‌ಎ ಅಡಿ ಅಪರಾಧವಲ್ಲ: ನ್ಯಾಯಾಲಯ

ಪಿಟಿಐ
Published 10 ನವೆಂಬರ್ 2022, 13:59 IST
Last Updated 10 ನವೆಂಬರ್ 2022, 13:59 IST
ಜೈಲಿನಿಂದ ಹೊರಬಂದ ಶಿವಸೇನಾ(ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ಸಂಸದ ಸಂಜಯ್‌ ರಾವುತ್‌ ಅವರನ್ನು ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ನಿವಾಸದಲ್ಲಿ ಗುರುವಾರ ಸ್ವಾಗತಿಸಲಾಯಿತು   –ಪಿಟಿಐ ಚಿತ್ರ
ಜೈಲಿನಿಂದ ಹೊರಬಂದ ಶಿವಸೇನಾ(ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ಸಂಸದ ಸಂಜಯ್‌ ರಾವುತ್‌ ಅವರನ್ನು ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರ ನಿವಾಸದಲ್ಲಿ ಗುರುವಾರ ಸ್ವಾಗತಿಸಲಾಯಿತು   –ಪಿಟಿಐ ಚಿತ್ರ   

ಮುಂಬೈ: ಶಿವಸೇನಾ(ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ಸಂಸದ ಸಂಜಯ್‌ ರಾವುತ್‌ ಅವರು ಆಲಿಬಾಗ್‌ ಹತ್ತಿರದ ಕಿಹಿಮ್‌ ಪ್ರದೇಶದಲ್ಲಿ ಭೂಮಿ ಕೊಳ್ಳಲು ದಾಖಲೆಯಿಲ್ಲದ ಹಣದ ವ್ಯವಹಾರ ಮಾಡಿದ್ದಾರೆ. ಆದರೆ, ಇದನ್ನೇ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ಇಲ್ಲಿಯ ವಿಶೇಷ ಕೋರ್ಟ್‌ ಹೇಳಿದೆ.

ಪಾತ್ರ ಚಾಳ್‌ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅವ್ಯವಹಾರದ ಮೊಕದ್ದಮೆಯಲ್ಲಿ ಸಂಜಯ್‌ ರಾವುತ್‌ ಅವರನ್ನು ಇ.ಡಿ ಆಗಸ್ಟ್‌ 1ರಂದು ಬಂಧಿಸಿತ್ತು. ಈ ಮೊಕದ್ದಮೆಯಲ್ಲಿ ಸಂಜಯ್‌ ಅವರಿಗೆ ವಿಶೇಷಪಿಎಂಎಲ್‌ಎ ನ್ಯಾಯಾಲಯದ ಬುಧವಾರ ಜಾಮೀನು ನೀಡಿದೆ.ವಿಚಾರಣಾಧಿಕಾರಿಗಳು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಹೇಳಿರುವಂತೆ ಸಂಜಯ್‌ ಅವರು ಸಹ ಆರೋಪಿ ಪ್ರವೀಣ್‌ ರಾವುತ್‌ ಅವರಿಂದ ದಾಖಲೆಯಿಲ್ಲದ ಮೂಲದಿಂದ ಹಣ ಪಡೆದಿರಬಹುದು. ಆದರೆ ಇದನ್ನೇ ಅಕ್ರಮ ಎಂದು ಹೇಳಲಾಗುವುದಿಲ್ಲ ಎಂಬ ಅಂಶವನ್ನು ವಿಶೇಷ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಎತ್ತಿಹಿಡಿದಿದ್ದರು.

ಜೊತೆಗೆ, ಪ್ರವೀಣ್‌ ರಾವುತ್‌ ಅವರ ಜೊತೆ ಸಂಜಯ್‌ ಅವರ ಕೈಗೊಂಡಿದ್ದ ಪ್ರವಾಸಗಳ ಮಾಹಿತಿ ಮತ್ತು ಸಂಜಯ್‌ ಬಳಸುತ್ತಿರುವ ಕಾರು ಅವರ ಸ್ನೇಹಿತರೊಬ್ಬರ ಹೆಸರಿನಲ್ಲಿದೆ ಎಂಬ ಅಂಶವನ್ನೂ ತನಿಖಾಧಿಕಾರಿಗಳು ಆರೋಪಿಪಟ್ಟಿಯಲ್ಲಿ ದಾಖಲಿಸಿದ್ದರು. ಅವುಗಳೆಲ್ಲವೂ ಮೇಲ್ನೊಟಕ್ಕೆ ಅಕ್ರಮಗಳಂತೆ ಕಾಣುವುದಿಲ್ಲ ಎಂದು ಕೋರ್ಟ್ ಹೇಳಿದೆ.

ADVERTISEMENT

ಮುಂಬೈನ ಅರ್ಥರ್‌ ರಸ್ತೆ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಸಂಜಯ್‌ ಬುಧವಾರ ಸಂಜೆ ಜೈಲಿನಿಂದ ಹೊರಬಂದರು.

ರಾವುತ್‌–ಉದ್ಧವ್‌ ಭೇಟಿ

ಹಣ ಅಕ್ರಮ ವರ್ಗಾವಣೆ ಮೊಕದ್ದಮೆಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು ಜಾಮೀನಿನ ಮೇಲೆ ಹೊರಬಂದಿರುವ ಸಂಜಯ್‌ ರಾವುತ್‌ ಅವರು ಶಿವಸೇನಾ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರನ್ನು ಅವರ ನಿವಾಸದಲ್ಲಿ ಗುರುವಾರ ಭೇಟಿ ಆದರು.

ಉದ್ಧವ್‌ ಅವರ ಜೊತೆ ಮಾತಾನಾಡಿದ್ದಾಗಿ ಮತ್ತು ಉದ್ಧವ್‌ ಧ್ವನಿ ಭಾರವಾಗಿದ್ದಾಗಿ ರಾವುತ್‌ ಅವರುಬುಧವಾರವೇ ಸುದ್ದಿಗಾರರಿಗೆ ಹೇಳಿದ್ದರು. ಜೈಲಿನಲ್ಲಿದ್ದ ವೇಳೆ ಉದ್ಧವ್‌ ತಮ್ಮ ಕುಟುಂಬದ ಜೊತೆ ನಿಂತಿದ್ದನ್ನು ಅವರು ಸ್ಮರಿಸಿದ್ದರು.

‘ನನ್ನ ಬಂಧನ ದುರುದ್ದೇಶಪೂರಿತ’

‘ನನ್ನನ್ನು ಪ್ರತ್ಯೇಕವಾಗಿ ಬಂಧಿಸಲಾಗಿತ್ತು. ನನ್ನ ಬಂಧನ ರಾಜಕೀಯ ಉದ್ದೇಶದಿಂದ ಕೂಡಿದ್ದರೂ, ಬಂಧನದ ಅವಧಿಯನ್ನು ನಾನು ಉತ್ತಮ ಉದ್ದೇಶಗಳಿಗೆ ಬಳಸಿಕೊಂಡಿದ್ದೇನೆ. ನನ್ನ ಬಂಧನದಿಂದ ನಾನು, ನನ್ನ ಕುಟುಂಬ ಮತ್ತು ನನ್ನ ಪಕ್ಷ ಸಾಕಷ್ಟು ನೋವು ಅನುಭವಿಸಬೇಕಾಯಿತು. ಈ ಅವಧಿಯಲ್ಲಿ ನನ್ನ ಕುಟುಂಬ ಸಾಕಷ್ಟು ಕಳೆದುಕೊಂಡಿದೆ’ ಎಂದು ರಾವುತ್‌ ಗುರುವಾರ ಹೇಳಿದರು.

ಈ ರೀತಿಯ ಪರಿಸ್ಥಿತಿಗಳು ಜೀವನದಲ್ಲಿ ಮತ್ತು ರಾಜಕೀಯದಲ್ಲಿ ಸಾಮಾನ್ಯ. ಆದರೆ ಈ ರೀತಿಯ ರಾಜಕೀಯವನ್ನು ದೇಶ ಹಿಂದೆಂದೂ ಕಂಡಿರಲಿಲ್ಲ ಎಂದರು.

ಸಂಜಯ್‌ ಅವರು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. ಜೊತೆಗೆ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನೂ ಭೇಟಿಯಾಗುವುದಾಗಿ ಹೇಳಿದ್ದಾರೆ. ಆದರೆ ಭೇಟಿಯ ಉದ್ದೇಶವನ್ನು ಬಿಟ್ಟುಕೊಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.