ಸಂಜಯ್ ರಾವುತ್
– ಪಿಟಿಐ ಚಿತ್ರ
ಮುಂಬೈ: ‘ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಬಿಜೆಪಿಯ ದ್ವೇಷ ರಾಜಕಾರಣವೇ ಪ್ರಮುಖ ಕಾರಣ’ ಎಂದು ಶಿವಸೇನಾ(ಯುಬಿಟಿ) ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ರಾವುತ್,‘ ‘ಭಯೋತ್ಪಾದಕರು ಜನರನ್ನು ಕೊಲ್ಲುವ ಮೊದಲು ಅವರ ಧರ್ಮವನ್ನು ಕೇಳಿದ್ದಾರೆ ಎಂದರೆ ಅದಕ್ಕೆ ಬಿಜೆಪಿಯ ದ್ವೇಷ ರಾಜಕಾರಣವೇ ಕಾರಣ. ಈ ದ್ವೇಷ ರಾಜಕಾರಣವೇ ಮುಂದೊಂದು ದಿನ ನಮಗೆ ತಿರುಗುಬಾಣವಾಗಿದೆ’ ಎಂದರು.
‘ಇದಕ್ಕೆ ಬೇರ್‍ಯಾರು ಜವಾಬ್ದಾರರಲ್ಲ. ಪಶ್ಚಿಮ ಬಂಗಾಳದಿಂದ ಕಾಶ್ಮೀರದವರೆಗೆ ಹರಡುತ್ತಿರುವ ದ್ವೇಷ ರಾಜಕಾರಣವೇ ಕಾರಣ’ ಎಂದು ಅವರು ಆರೋಪಿಸಿದರು.
‘ಸರ್ಕಾರಗಳನ್ನು ರಚಿಸುವುದು, ಉರುಳಿಸುವುದು ಮತ್ತು ವಿರೋಧ ಪಕ್ಷಗಳ ನಾಯಕರನ್ನು ಜೈಲಿಗೆ ಹಾಕುವುದರಲ್ಲಿಯೇ ಅವರು(ಬಿಜೆಪಿ ನಾಯಕರು) ದಿನದ 24 ಗಂಟೆ ಕಳೆದರೆ, ಜನರನ್ನು ರಕ್ಷಿಸುವುದು ಹೇಗೆ?’ ಎಂದು ಕೇಳಿದರು.
‘ದೇಶದ ಇತಿಹಾಸದಲ್ಲಿಯೇ ಅಮಿತ್ ಶಾ ಒಬ್ಬ ವಿಫಲ ಗೃಹ ಸಚಿವ. ಇಡೀ ದೇಶವೇ ಅವರ ರಾಜೀನಾಮೆಯನ್ನು ಕೇಳುತ್ತಿದೆ. ಒಂದು ಕ್ಷಣ ಕೂಡ ಆ ಹುದ್ದೆಯಲ್ಲಿ ಮುಂದುವರಿಯಲು ಅವರಿಗೆ ಹಕ್ಕಿಲ್ಲ’ ಎಂದು ಕಿಡಿಕಾರಿದರು.
‘ಬಿಹಾರ ಚುನಾವಣೆ ಸಮೀಪಿಸುತ್ತಿರುವ ಕಾರಣ ಕೇಂದ್ರ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ನಡೆಸಿ ರಾಜಕೀಯ ಮಾಡಲಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.