ADVERTISEMENT

‘ಮಹಾ’ ಸರ್ಕಾರ ಉರುಳಿಸಲು ನೆರವಾಗುವಂತೆ ಕೆಲವರು ನನ್ನ ಸಂಪರ್ಕಿಸಿದ್ದರು: ರಾವುತ್‌

ರಾಜ್ಯಸಭಾ ಸಭಾಪತಿಗೆ ಪತ್ರ ಬರೆದ ಶಿವಸೇನಾ ಮುಖಂಡ ಸಂಜಯ್‌ ರಾವುತ್‌

ಪಿಟಿಐ
Published 9 ಫೆಬ್ರುವರಿ 2022, 11:00 IST
Last Updated 9 ಫೆಬ್ರುವರಿ 2022, 11:00 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ: ಮಹಾರಾಷ್ಟ್ರದ ‘ಮಹಾವಿಕಾಸ ಅಘಾಡಿ’ (ಎಂವಿಎ)ಸರ್ಕಾರವನ್ನು ಉರುಳಿಸಲು ನೆರವಾಗುವಂತೆ ‘ಕೆಲವರು’ ಇತ್ತೀಚೆಗೆ ನನ್ನನ್ನು ಸಂಪರ್ಕಿಸಿದ್ದರು ಎಂದು ಆರೋಪಿಸಿರುವ ಶಿವಸೇನಾ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್‌, ಈ ಕುರಿತು ಉಪರಾಷ್ಟ್ರಪತಿಯೂ ಆಗಿರುವ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

ಮಹಾರಾಷ್ಟ್ರದಲ್ಲಿ ಪ್ರಜಾಸತ್ತಾತ್ಮಕವಾಗಿ ರಚನೆಯಾಗಿರುವ ಸರ್ಕಾರವನ್ನು ಉರುಳಿಸುವ ದುರುದ್ದೇಶವನ್ನು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರ ಸರ್ಕಾರದ ಇತರ ಏಜೆನ್ಸಿಗಳು ಹೊಂದಿವೆ. ಶಿವಸೇನಾ ಪಕ್ಷವು ಬಿಜೆಪಿಯೊಂದಿಗಿನ ಮೈತ್ರಿ ತೊರೆದು ಎನ್‌ಸಿಪಿ, ಕಾಂಗ್ರೆಸ್‌ ಪಕ್ಷಗಳೊಂದಿಗೆ ಸೇರಿ ಎಂವಿಎ ಸರ್ಕಾರ ರಚಿಸಿದ ಬಳಿಕ ಈ ಏಜೆನ್ಸಿಗಳು ಶಿವಸೇನಾ ನಾಯಕರನ್ನು ವ್ಯವಸ್ಥಿತವಾಗಿ ಗುರಿಯಾಗಿಸುತ್ತಿವೆ ಎಂದು ಅವರು ಪತ್ರದಲ್ಲಿ ದೂರಿದ್ದಾರೆ.

ಈ ರೀತಿಯ ಅಧಿಕಾರ ದುರ್ಬಳಕೆ ಮತ್ತುರಾಜ್ಯಸಭಾ ಸದಸ್ಯರ ಮೇಲೆ ನಡೆಯುತ್ತಿರುವ ಶೋಷಣೆಯ ವಿರುದ್ಧ ಮಾತನಾಡುವುದರ ಜತೆಗೆ, ಸಂಬಂಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾವುತ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರದ ಏಜೆನ್ಸಿಗಳ ಒತ್ತಡಗಳಿಗೆ ಹೆದರವುದೂ ಇಲ್ಲ, ತಲೆಬಾಗುವುದೂ ಇಲ್ಲ. ಅಲ್ಲದೆ ಈ ಕುರಿತ ಸತ್ಯವನ್ನು ಸಭೆಯ ಒಳಗೆ ಮತ್ತು ಹೊರಗೆ ಹೇಳುವುದನ್ನು ಮುಂದುವರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಈ ಪತ್ರದ ಪ್ರತಿಗಳನ್ನು ರಾವುತ್‌ ಅವರು, ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರಿಗೂ ಕಳುಹಿಸಿದ್ದಾರೆ.

‘ಈ ಪತ್ರ ಕೇವಲ ಟ್ರೈಲರ್‌ ಆಗಿದೆ ಎಂದಿರುವ ಅವರು, ಜಾರಿ ನಿರ್ದೇಶನಾಲಯದ ಸಿಬ್ಬಂದಿ ಹೇಗೆ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸುವೆ’ ಎಂದು ರಾವುತ್‌ ಸುದ್ದಿಗಾರರಿಗೆ ಬುಧವಾರ ತಿಳಿಸಿದರು.

‘ಮಹಾರಾಷ್ಟ್ರದ ಸರ್ಕಾರವನ್ನು ಉರುಳಿಸಲು ಸಹಾಯ ಮಾಡುವಂತೆ ತಿಂಗಳ ಹಿಂದೆ ಕೆಲವರು ನನ್ನನ್ನು ಸಂಪರ್ಕಿಸಿದ್ದರು. ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ನಡೆಸಬೇಕು ಎಂಬ ದುರುದ್ದೇಶ ಅವರದ್ದಾಗಿತ್ತು ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿರುವುದಾಗಿ’ ಅವರು ಹೇಳಿದರು.

‘ಅವರ ಈ ರಹಸ್ಯ ಕಾರ್ಯಸೂಚಿಯಲ್ಲಿ ಭಾಗಿಯಾವುದಕ್ಕೆ ನಾನು ನಿರಾಕರಿಸಿದೆ. ಇದಕ್ಕೆ ಪ್ರತಿಯಾಗಿ ಅವರು, ಭಾರಿ ದಂಡ ತೆರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ’ ಎಂದು ಅವರು ವಿವರಿಸಿದರು.

‘ಜೈಲಿನಲ್ಲಿ ಹಲವು ವರ್ಷಗಳು ಕಳೆದರೈಲ್ವೆಯ ಮಾಜಿ ಸಚಿವರೊಬ್ಬರಿಗೆ ಬಂದ ಸಂಕಷ್ಟಗಳು ನಿಮಗೂ ಎದುರಾಗಬಹುದು ಎಂದು ಅವರು ಎಚ್ಚರಿಸಿದರು. ಅಲ್ಲದೆ ಮಹಾರಾಷ್ಟ್ರ ಸರ್ಕಾರದ ಇಬ್ಬರು ಹಿರಿಯ ಸಚಿವರೂ ಸೇರಿದಂತೆ ಹಲವು ನಾಯಕರುಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಜೈಲು ಸೇರಬೇಕಾಗುತ್ತದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ’ ಎಂದು ರಾವುತ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.