ADVERTISEMENT

ಮುಂದಿನ 25 ವರ್ಷವೂ ಶಿವಸೇನಾದ್ದೇ ರಾಜ್ಯಭಾರ: ಸಂಜಯ್ ರಾವುತ್

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 7:40 IST
Last Updated 15 ನವೆಂಬರ್ 2019, 7:40 IST
ಸಂಜಯ್ ರಾವುತ್
ಸಂಜಯ್ ರಾವುತ್   

ಮುಂಬೈ: ಮಹಾರಾಷ್ಟ್ರದ ಮುಂದಿನ ಸರ್ಕಾರದ ನೇತೃತ್ವವನ್ನು ಶಿವಸೇನಾ ವಹಿಸಲಿದ್ದು, ರಾಜ್ಯದ ಹಿತದೃಷ್ಟಿಯಿಂದಾಗಿ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ(CMP) ಜಾರಿಗೆ ಬರಲಿದೆ ಎಂದು ಸೇನಾದ ವಕ್ತಾರ ಸಂಜಯ್ ರಾವುತ್ ಶುಕ್ರವಾರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಐದು ವರ್ಷ ಮಾತ್ರವಲ್ಲ. ಉದ್ಧವ್ ಠಾಕ್ರೆ ಅವರ ನೇತೃತ್ವದ ಪಕ್ಷವು ಮುಂದಿನ 25 ವರ್ಷಗಳವರೆಗೆ ಮಹಾರಾಷ್ಟ್ರದಲ್ಲಿ ಸರ್ಕಾರ ನಡೆಸಲಿದೆ ಎಂದು ಹೇಳಿದರು.

ಶಿವಸೇನಾವು ಎನ್‌ಸಿಪಿ ಅಥವಾ ಕಾಂಗ್ರೆಸ್‌ನೊಂದಿಗೆ ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾವುತ್, ರಾಜ್ಯದ ಜನರನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿಗಾಗಿ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಮಾತುಕತೆ ನಡೆಯುತ್ತಿದೆ.ಒಂದೇ ಪಕ್ಷದ ಅಥವಾ ಮೈತ್ರಿಯಾದರೂ ಸರ್ಕಾರಕ್ಕೆ ಆಡಳಿತದ ಕಾರ್ಯಸೂಚಿ ಅಗತ್ಯವಾಗಿರುತ್ತದೆ. ಬರ, ಅಕಾಲಿಕ ಮಳೆಗೆ ಸಂಬಂಧಿಸಿದಂತೆ ಮೂಲಸೌಕರ್ಯದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ನಮ್ಮೊಂದಿಗೆ ಬರುವವರು ಅನುಭವಿ ಆಡಳಿತಗಾರರು. ಅವರ ಅನುಭವದ ಲಾಭವನ್ನು ನಾವು ಪಡೆಯುತ್ತೇವೆ ಎಂದು ತಿಳಿಸಿದರು.

ADVERTISEMENT

ಸೇನಾದ ರಾಜಕೀಯ ಎದುರಾಳಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಕುರಿತಾಗಿ ಉತ್ತರಿಸಿದ ಅವರು, ದೇಶದ ಹಳೆಯ ಪಕ್ಷವಾಗಿರುವ ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ್ದಾರೆ ಮತ್ತು ಮಹಾರಾಷ್ಟ್ರದ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಮುಂದಿನ 25 ವರ್ಷಗಳವರೆಗೆ ಮುಖ್ಯಮಂತ್ರಿ ಹುದ್ದೆಯನ್ನು ಸೇನೆಯೇ ಹೊಂದಿರಬೇಕೆಂದು ನಾವು ಬಯಸುತ್ತೇವೆ. ತಡೆಯಲು ಯಾರು ಎಷ್ಟೇ ಪ್ರಯತ್ನಿಸಿದರೂ ಸೇನಾ ಉತ್ತಮ ಆಡಳಿತ ನೀಡುತ್ತದೆ ಎಂದು ತಿಳಿಸಿದರು.

ನಮ್ಮ ಪಕ್ಷವು ರಾಜ್ಯ ರಾಜಕಾರಣದಲ್ಲಿ ಸುಮಾರು 50 ವರ್ಷಗಳಿಂದಲೂ ಕಾರ್ಯಪ್ರವೃತ್ತವಾಗಿದ್ದು, ಮಹಾರಾಷ್ಟ್ರದೊಂದಿಗಿನ ಪಕ್ಷದ ಸಂಬಂಧ ಶಾಶ್ವತ ಹೊರತು ತಾತ್ಕಾಲಿಕವಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.