ADVERTISEMENT

ಪಾಕ್ ಕಡೆ ಬೆರಳು ತೋರದೇ ಕಾಶ್ಮೀರಿ ಪಂಡಿತರಿಗಾಗಿ ನೀವೇನು ಮಾಡುತ್ತೀರಿ? ರಾವುತ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮೇ 2022, 5:43 IST
Last Updated 13 ಮೇ 2022, 5:43 IST
ಸಂಜಯ್ ರಾವುತ್
ಸಂಜಯ್ ರಾವುತ್   

ಮುಂಬೈ: ಪಾಕಿಸ್ತಾನದತ್ತ ಬೆರಳು ತೋರಿಸುವ ಬದಲು ಕಾಶ್ಮೀರಿ ಪಂಡಿತರಿಗಾಗಿ ನೀವೇನು ಮಾಡಬಹುದು ಎಂಬುದನ್ನು ಮಾಡಿ ತೋರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಶಿವಸೇನಾ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರ ರಾಹುಲ್‌ ಭಟ್‌ ಹತ್ಯೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ‘ಗೃಹ ಸಚಿವಾಲಯವು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪಾಕಿಸ್ತಾನದತ್ತ ಬೆರಳು ತೋರಿಸುವ ಬದಲು ಕಾಶ್ಮೀರಿ ಪಂಡಿತರಿಗಾಗಿ ನೀವೇನು ಮಾಡಬಹುದು ಎಂಬುದನ್ನು ಮಾಡಿ ತೋರಿಸಿ’ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

370ನೇ ವಿಧಿಯ ರದ್ದತಿ ಬಳಿಕವೂ ಕಾಶ್ಮೀರಿ ಪಂಡಿತರು ಜಮ್ಮು ಮತ್ತು ಕಾಶ್ಮೀರಕ್ಕೆ ವಾಪಸಾಗುತ್ತಿಲ್ಲ. ಕಳೆದ 7 ವರ್ಷಗಳಲ್ಲಿ ಎಷ್ಟು ಮಂದಿ ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ವಾಪಸಾಗಿದ್ದರೋ ಗೊತ್ತಿಲ್ಲ. ಅಲ್ಲಿ ಸದ್ಯ ವಾಸ ಮಾಡುತ್ತಿರುವವರೂ ಸುರಕ್ಷಿತವಾಗಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿನ ಅಸ್ಥಿರ ವಾತಾವರಣವನ್ನು ಕೊನೆಗಾಣಿಸಲು ನೀವು (ಕೇಂದ್ರ) ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ ಎಂದು ರಾವುತ್ ಹೇಳಿರುವುದಾಗಿ ‘ಎಎನ್‌ಐ’ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್‌ ಕಚೇರಿಯಲ್ಲಿ ಗುರುವಾರ ಉಗ್ರನೊಬ್ಬ ರಾಹುಲ್‌ ಭಟ್‌ ಅವರನ್ನು ಹತ್ಯೆ ಮಾಡಿದ್ದ. ರಾಹುಲ್ ಕೆಲಸ ಮಾಡುತ್ತಿದ್ದಾಗ ಅವರ ಕೊಠಡಿಯನ್ನು ಏಕಾಏಕಿ ಪ್ರವೇಶಿಸಿದ ಉಗ್ರ ಗುಂಡು ಹಾರಿಸಿದ್ದ. ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ರಾಹುಲ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.