ನವದೆಹಲಿ: ‘ಸಂಸ್ಕೃತವು ವೈಜ್ಞಾನಿಕ ಭಾಷೆಯಾಗಿದೆ. ಈ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಧ್ಯಯನ ವರದಿಯನ್ನೂ ಪ್ರಕಟಿಸಿತ್ತು’ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಭಾನುವಾರ ಹೇಳಿದ್ದಾರೆ.
ಸಂಸ್ಕೃತ ಭಾರತಿ ಎನ್‌ಜಿಒ ಸಹಯೋಗದಲ್ಲಿ ದೆಹಲಿ ಸರ್ಕಾರವು ಕಳೆದ 10 ದಿನಗಳಿಂದ ನಡೆಸಿದ ಸಂಸ್ಕೃತ ಕಲಿಕಾ ಕಾರ್ಯಾಗಾರವು ಭಾನುವಾರ ಕೊನೆಗೊಂಡಿತು. ಅದರ ಸಮಾರೋಪ ಸಮಾರಂಭದಲ್ಲಿ ರೇಖಾ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಅವರು, ‘ಸಂಸ್ಕೃತ ಒಂದು ವೈಜ್ಞಾನಿಕ ಭಾಷೆಯಾಗಿದ್ದು, ಆ ಭಾಷೆಯಲ್ಲಿ ಕೋಡಿಂಗ್ ಕೂಡ ಮಾಡಬಹುದು. ಸಂಸ್ಕೃತ ಕಂಪ್ಯೂಟರ್‌ಸ್ನೇಹಿ ಭಾಷೆ ಎಂಬುದನ್ನು ಖುದ್ದು ನಾಸಾದ ವಿಜ್ಞಾನಿಗಳು ದೃಢಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಧ್ಯಯನ ವರದಿಯನ್ನೂ ರಚಿಸಿದ್ದಾರೆ’ ಎಂದಿದ್ದಾರೆ.
ನಾಸಾದ ಏಮ್ಸ್ ಸಂಶೋಧನಾ ಕೇಂದ್ರದ ಸಂಶೋಧಕರಾಗಿದ್ದ ರಿಕ್ ಬ್ರಿಗ್ಸ್ ಎಂಬವರು 1985ರಲ್ಲಿ ‘ನಾಲೆಡ್ಜ್ ರೆಪ್ರಸೆಂಟೇಷನ್ ಇನ್ ಸ್ಯಾನ್‌ಸ್ಕ್ರಿಟ್ ಆ್ಯಂಡ್ ಆರ್ಟಿಫಿಶಲ್ ಇಂಟಲಿಜೆನ್ಸ್’ ಎಂಬ ಶೀರ್ಷಿಕೆಯ ಸಂಶೋಧನಾ ವರದಿ ಬರೆದಿದ್ದರು. ಸ್ಥಳೀಯ ಭಾಷೆಗಳು ಕೃತಕ ಬುದ್ಧಿಮತ್ತೆ ಭಾಷೆಗಳಾಗಿ ಬಳಕೆಯಾಗಬಲ್ಲವು ಎಂಬುದನ್ನು ನಿರೂಪಿಸುವುದು ಈ ಅಧ್ಯಯನದ ಉದ್ದೇಶವಾಗಿತ್ತು. ಇದೇ ಅಧ್ಯಯನ ವರದಿಯನ್ನು ಆಧರಿಸಿ ರೇಖಾ ಸಂಸ್ಕೃತವನ್ನು ವೈಜ್ಞಾನಿಕ ಭಾಷೆ ಎಂದು ಬಣ್ಣಿಸಿದ್ದಾರೆ ಎನ್ನಲಾಗಿದೆ.
ಸಂಸ್ಕೃತವು ಭಾರತದ ಎಲ್ಲಾ ಭಾಷೆಗಳ ಮಾತೃಭಾಷೆಯಾಗಿದೆ. ಯಾವುದೇ ಭಾಷೆಯ ಬಗ್ಗೆಯೂ ವಿರೋಧವಿಲ್ಲ. ಯಾರನ್ನೂ ಮಾತೃಭಾಷೆಯಿಂದ ದೂರವಿಡಲು ಸಾಧ್ಯವಿಲ್ಲ.ಅಮಿತ್ ಶಾ ಕೇಂದ್ರ ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.