ADVERTISEMENT

ತಮಿಳುನಾಡು ರಾಜಕೀಯ: ಶಶಿಕಲಾ ಮರುಪ್ರವೇಶ ಚರ್ಚೆಗೆ ಬಿರುಸು

ಇ.ಟಿ.ಬಿ ಶಿವಪ್ರಿಯನ್‌
Published 8 ಜೂನ್ 2021, 0:59 IST
Last Updated 8 ಜೂನ್ 2021, 0:59 IST
ಶಶಿಕಲಾ
ಶಶಿಕಲಾ   

ಚೆನ್ನೈ: ಎಐಎಡಿಎಂಕೆ ಉಚ್ಚಾಟಿತನಾಯಕಿ ವಿ.ಕೆ. ಶಶಿಕಲಾ ಅವರು ಕಳೆದವಾರ ಪಕ್ಷದ ಸದಸ್ಯರ ಜೊತೆ ದೂರವಾಣಿಯಲ್ಲಿ ನಡೆಸಿದ್ದ ಸಂಭಾಷಣೆಯ ತುಣುಕು ಹೊರಬಿದ್ದಿತ್ತು. ಈ ಪ್ರಕರಣ ಬಳಿಕ ತಮಿಳುನಾಡಿನಲ್ಲಿ ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಶಶಿಕಲಾ ಅವರ ರಾಜಕೀಯ ಮರುಪ್ರವೇಶದ ಕುರಿತು ಭಾರಿ ಚರ್ಚೆಗಳು ನಡೆಯುತ್ತಿವೆ. ಇದರಿಂದ ಅವರು ರಾಜಕೀಯದಲ್ಲಿ ಎರಡನೇ ಇನ್ನಿಂಗ್ಸ್‌ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ, ಮಾರ್ಚ್‌ 3ರಂದು ಶಶಿಕಲಾ ಅವರು ತಾವು ರಾಜಕೀಯದಿಂದ ಹೊರಗುಳಿಯುವುದಾಗಿ ಹೇಳಿದ್ದರು. ಆದರೆ ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಅವರು ತಮ್ಮ ಬೆಂಬಲಿಗರ ಜೊತೆ ತಮಗೆ ರಾಜಕೀಯಕ್ಕೆ ಮರಳುವ ಆಸಕ್ತಿ ಇದೆ ಎಂದು ಹೇಳಿಕೊಂಡಿದ್ದಾರೆ. ತಾವು ಅಂದಿನ ಮುಖ್ಯಮಂತ್ರಿ ಜಯಲಲಿತಾ ರೀತಿ ಎಐಡಿಎಂಕೆಗೆ ಮಾರ್ಗದರ್ಶನ ಮಾಡುತ್ತೇನೆ ಎಂದು ಅವರು ದೂರವಾಣಿಯಲ್ಲಿ ಹೇಳಿದ್ದೂ ಬಹಿರಂಗವಾಗಿತ್ತು.

ಆದರೆ, ಇದಕ್ಕೆ ಪಕ್ಷದ ಹಿರಿಯ ನಾಯಕರಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತು ಒ. ಪನ್ನೀರಸೆಲ್ವಂ ಸೇರಿ ಎಐಎಡಿಎಂಕೆಯ ಪ್ರಮುಖ ಸ್ಥಾನದಲ್ಲಿರುವ ಹಲವು ನಾಯಕರು ಶಶಿಕಲಾ ಅವರಿಂದ ನೇಮಕ ಆದವರು. ಶಶಿಕಲಾ ಅವರ ದೂರವಾಣಿ ಸಂಭಾಷಣೆ ವೈರಲ್‌ ಆದ ಬಳಿಕ ಯಾರೂ ಈ ಕುರಿತು ಧನಾತ್ಮಕವಾಗಿ ಮಾತನಾಡಿಲ್ಲ. ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ, ಶಶಿಕಲಾ ಸದ್ಯ ಪಕ್ಷದ ಸದಸ್ಯರಲ್ಲ ಎಂದಷ್ಟೇ ಹೇಳಿದ್ದಾರೆ.

ADVERTISEMENT

2017ರಲ್ಲಿ ಶಶಿಕಲಾ ಅವರೇ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿದ್ದರು. ಆದರೆ ಈಗ ಶಶಿಕಲಾ ಮರುಪ್ರವೇಶವನ್ನುಅವರೇ ವಿರೋಧಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಶಶಕಿಲಾ ಫೋನ್‌ ಮೂಲಕ ಸಂಪರ್ಕಿಸಿರುವುದು ಎಐಎಡಿಎಂಕೆ ಒಳಗೆ ಅಸಮಾಧಾನ ಮೂಡಿಸಿದೆ ಎಂದೂ ಹೇಳಲಾಗುತ್ತಿದೆ.

ಶಶಿಕಲಾ ಮರಳುವ ವಿಶ್ವಾಸ: ಶಶಿಕಲಾ ರಾಜಕೀಯಕ್ಕೆ ಮರಳುವ ವಿಶ್ವಾಸವನ್ನು ಅವರ ಬೆಂಬಲಿಗರು ಹೊಂದಿದ್ದಾರೆ.‘ಇದೆಲ್ಲಾ ಕೇವಲ ಟ್ರೇಲರ್‌ ಅಷ್ಟೇ, ಮರೀನಾ ಕಡಲತೀರದಲ್ಲಿರುವ ಜಯಲಲಿತಾ ಸ್ಮಾರಕಕ್ಕೆ ಶಶಿಕಲಾ ಭೇಟಿ ನೀಡಿದ ಬಳಿಕ ಇಡೀ ಚಿತ್ರ ಆರಂಭವಾಗುತ್ತದೆ’ ಎಂದು ಅವರ ಬೆಂಬಲಿಗರೊಬ್ಬರು ಹೇಳಿದ್ದಾರೆ. ಅವರು ತಮ್ಮ ರಾಜಿಕೀಯ ಪ್ರಯಾಣವನ್ನು ಅಮ್ಮನ (ಜಯಲಲಿಲಾ) ವಿಶ್ರಾಂತಿ ಸ್ಥಳದಿಂದ ಆರಂಭಿಸಲಿದ್ದಾರೆ. ದಿನಾಂಕವನ್ನು ಇನ್ನೂ ನಿಗದಿಪಡಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಶಶಿಕಲಾ ಪರ ಪಕ್ಷದ ಸದ್ಯಸರು ಇಲ್ಲ: ಶಶಿಕಲಾ ಅವರ ದೂರವಾಣಿ ಸಂಭಾಷಣೆಯಿಂದ ಪಕ್ಷದ ಮೇಲೆ ಯಾವುದೇ ರೀತಿಯ ಪರಿಣಾಮ ಆಗಿಲ್ಲ ಎಂದು ಎಐಎಡಿಎಂಕೆಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ಅದಲ್ಲದೇ ಎಐಎಡಿಎಂಕೆ ಪ್ರಮುಖ ಸ್ಥಾನಗಳಲ್ಲಿ ಇರುವ ಮುಖಂಡರು ಯಾರೂ ಶಶಿಕಲಾ ಅವರ ಪರವಾಗಿ ಮಾತನಾಡಿಲ್ಲ. ಅವರಿಗೆ ಪಕ್ಷದಲ್ಲಿ ಬೆಂಬಲಿಗರು ಇದ್ದದ್ದೇ ಆದರೆ ಅವರು ಈವೇಳೆಗೆ ಹೊರ ಬಂದು ತಮ್ಮ ಬಲ ತೋರಬೇಕಿತ್ತು. ಆದರೆ ಅಂಥದ್ದೇನೂ ನಡೆಯುತ್ತಿಲ್ಲ. ಶಶಿಕಲಾ ತಮ್ಮ ಧ್ವನಿ ಜೋರಾಗಿ ಕೇಳುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಅಷ್ಟೇ. ಅವರು ನಿಧಾನವಾಗಿ ರಾಜಕೀಯದಿಂದ ನಿರ್ಗಮಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.