ADVERTISEMENT

ಮಹಾರಾಷ್ಟ್ರ | ಸತಾರಾ ವೈದ್ಯೆ ಆತ್ಮಹತ್ಯೆ ಪ್ರಕರಣ: ಪಿಎಸ್‌ಐ, ಟೆಕಿ ಬಂಧನ

ಪಿಟಿಐ
Published 25 ಅಕ್ಟೋಬರ್ 2025, 15:34 IST
Last Updated 25 ಅಕ್ಟೋಬರ್ 2025, 15:34 IST
_
_   

ಮುಂಬೈ: ಸತಾರಾ ಜಿಲ್ಲೆಯ ಸರ್ಕಾರಿ ವೈದ್ಯೆಯ ಆತ್ಮಹತ್ಯೆ ಪ್ರಕರಣದಲ್ಲಿ ರಾಜಕಾರಣಿಯೊಬ್ಬರ ಹೆಸರು ಕೇಳಿಬರುತ್ತಿದ್ದಂತೆ ಪೊಲೀಸರು ಕಾರ್ಯಪ್ರವರ್ತರಾಗಿದ್ದು, ಪುಣೆ ಮೂಲದ ಟೆಕಿಯನ್ನು ಬಂಧಿಸಿದ್ದಾರೆ. ಜೊತೆಗೆ ಅವರ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಪೊಲೀಸ್ ಅಧಿಕಾರಿಯನ್ನು ಬಂಧಿಸಲು ಶೋಧ ಪ್ರಾರಂಭಿಸಿದ್ದಾರೆ. 

ಸತಾರಾ ಜಿಲ್ಲೆಯ ಫಲ್ಟಣ್ ಉಪ‍ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 28 ವರ್ಷದ ವೈದ್ಯೆಯು ಪಟ್ಟಣದ ಹೋಟೆಲ್‌ನ ಕೊಠಡಿಯೊಂದರಲ್ಲಿ ಗುರುವಾರ ನೇಣು ಹಾಕಿಕೊಂಡು, ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಅವರು ಅಂಗೈನಲ್ಲಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ ಪೊಲೀಸ್ ಸಬ್‌ ಇನ್‌ಸ್ಪೆಪೆಕ್ಟರ್‌ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಹೆಸರುಗಳನ್ನು ಬರೆದಿಟ್ಟಿದ್ದರು.

ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿಕೊಂಡಿರುವ ಸತಾರಾ ಪೊಲೀಸರು, ಪುಣೆ ಮೂಲದ ಟೆಕ್ಕಿ ಪ್ರಶಾಂತ್ ಬಣಕರ್‌ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಸಬ್‌ ಇನ್‌ಸ್ಪೆಕ್ಟರ್‌ ಗೋಪಾಲ್ ಬದನೆಯನ್ನು ಪತ್ತೆಹಚ್ಚಲು ಪೊಲೀಸರ ತಂಡಗಳು ಹುಡುಕಾಟ ನಡೆಸಿವೆ. ಮೃತ ವೈದ್ಯೆಯು ಬಂಧಿತ ಆರೋಪಿ ತಂದೆಯ ಮಾಲೀಕತ್ವದ ಮನೆಯಲ್ಲಿ ವಾಸವಾಗಿದ್ದರು.

ADVERTISEMENT

ಮತ್ತೊಂದೆಡೆ, ಕಳೆದ ತಿಂಗಳು ಪೊಲೀಸರು ವೈದ್ಯೆಯ ವಿರುದ್ಧ ಮೇಲಾಧಿಕಾರಿಗೆ ದೂರು ಸಲ್ಲಿಸಿದ್ದರು. ವೈದ್ಯೆಯು ವಿಕ್ಷಿಪ್ತ ನಡವಳಿಕೆಯವರಾಗಿದ್ದು, ಕೆಲಸದಲ್ಲಿ ಸಹಕರಿಸುತ್ತಿಲ್ಲ. ಯಾವುದೇ ಆರೋಪಿಯ ವೈದ್ಯಕೀಯ ತಪಾಸಣೆಗೆ ಅವರನ್ನು ನೇಮಿಸಬಾರದು ಎಂದು ದೂರಿನಲ್ಲಿ ಕೇಳಲಾಗಿತ್ತು.

ಆದಾಗ್ಯೂ, ಈ ದೂರಿಗೆ ನಾಲ್ಕು ಪುಟಗಳಲ್ಲಿ ಉತ್ತರ ನೀಡಿದ್ದ ವೈದ್ಯೆ, ‘ಆರೋಪಿಗಳಿಗೆ ನಕಲಿ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ನೀಡುವಂತೆ ಗೋಪಾಲ್ ಬದನೆ ಮತ್ತು ಇತರ ಪೊಲೀಸ್ ಸಿಬ್ಬಂದಿ ಒತ್ತಡ ಹೇರುತ್ತಿದ್ದಾರೆ. ಜೊತೆಗೆ ಆರೋಪಿಯೊಬ್ಬನ ವೈದ್ಯಕೀಯ ಪ್ರಮಾಣಪತ್ರವನ್ನು ಬದಲಾಯಿಸುವಂತೆ ಸಹಾಯಕರ ಮೂಲಕ ಸಂಸದರೊಬ್ಬರು ಒತ್ತಡ ಹೇರಿದ್ದಾರೆ’ ಎಂದು ಆರೋಪಿಸಿದ್ದರು.

ಪ‍್ರಕರಣದಲ್ಲಿ ಆಡಳಿತಾರೂಢ ಮಹಾಯುತಿ ಸರ್ಕಾರ ಪೊಲೀಸರನ್ನು ರಕ್ಷಿಸುತ್ತಿದೆ ಎಂದು ವಿಪಕ್ಷ ಮಹಾ ವಿಕಾಸ್ ಅಘಾಡಿಯ ಪಕ್ಷಗಳು ಆರೋಪಿಸಿವೆ. 

ಶಿವಸೇನೆ (ಯುಬಿಟಿ) ನಾಯಕ ಅಂಬಾದಾಸ್ ದಾನ್ವೆ ಅವರು ವೈದ್ಯೆಯು ಅಧಿಕಾರಿಗಳಿಗೆ ಬರೆದ ನಾಲ್ಕು ಪುಟಗಳ ಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ‘ಲಡ್ಕಿ ಬಹಿನ್‌ಗಿಂತ ಮಹಿಳಾ ಭದ್ರತೆಯ ಅಗತ್ಯವಿದೆ. ಫಡಣವೀಸ್ ಅಡಿಯಲ್ಲಿ ಪ್ರವರ್ಧಮಾನಕ್ಕೆ ಬಂದ ಜನರು ಮಹಿಳೆಯರಿಗೆ ಈ ರೀತಿ ಕಿರುಕುಳ ನೀಡುತ್ತಿದ್ದರೆ, ಅವರು ಗೃಹ ಸಚಿವರಾಗಿ ವಿಫಲರಾಗಿದ್ದಾರೆ ಎಂದರ್ಥ. ಅವರು ರಾಜೀನಾಮೆ ನೀಡಬೇಕು’ ಎಂದು ಹೇಳಿದ್ದಾರೆ.

ಮೃತ ವೈದ್ಯೆಯನ್ನು ಬೆದರಿಸಿದ ಸಂಸದರೊಬ್ಬರ ಇಬ್ಬರು ಸಹಾಯಕರ ಬಗ್ಗೆ ಪ್ರಶ್ನಿಸಿದ ದಾನ್ವೆ, ‘ವೈದ್ಯೆಯ ದೂರಿನ ಬಗ್ಗೆ ಅವರ ಮೇಲಾಧಿಕಾರಿ ಯಾವ ಕ್ರಮ ಕೈಗೊಂಡರು’ ಎಂದೂ ಪ್ರಶ್ನಿಸಿದ್ದಾರೆ. 

ವಿರೋಧ ಪಕ್ಷಗಳ ಆರೋಪಗಳಿಗೆ ಪತ್ರಿಕ್ರಿಯೆ ನೀಡಿದ ರಾಜ್ಯದ ಗೃಹ ಸಚಿವರೂ ಆಗಿರುವ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ‘ಇಂತಹ ವಿಚಾರವನ್ನೂ ವಿಪಕ್ಷಗಳು ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ. ಅವರು ಘಟನೆಗೆ ರಾಜಕೀಯ ಬಣ್ಣ ನೀಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಕರಣ ಗಂಭೀರವಾದುದು ಎಂದು ಪ್ರತಿಪಾದಿಸಿದ ಅವರು, ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ಮಹಾಯುತಿ ಸರ್ಕಾರ ಪೊಲೀಸರನ್ನು ಪದೇ ಪದೇ ರಕ್ಷಿಸುತ್ತಿರುವುದರಿಂದ ಪೊಲೀಸ್ ದೌರ್ಜನ್ಯ ಹೆಚ್ಚಳವಾಗಿದೆ. ಕೇವಲ ತನಿಖೆಗೆ ಆದೇಶಿಸಿದರೆ ಸಾಕಾಗುವುದಿಲ್ಲ. ಆರೋಪಿ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡಬೇಕು
- ವಿಜಯ ವಡೆಟ್ಟಿವಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ

‘ಇದು ದುಃಖಕರ ಮತ್ತು ಗಂಭೀರ ವಿಚಾರ. ವೈದ್ಯೆ ಎದುರಿಸಿದ ಸಂಕಟವನ್ನು ಊಹಿಸಿ... ಅವರು ಆರೋಪಿಗಳ ಹೆಸರನ್ನು ಅಂಗೈನಲ್ಲಿ ಬರೆದಿಟ್ಟು ಜೀವ ಕಳೆದುಕೊಂಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆರೋಪಿ ಪೊಲೀಸ್ ಅಧಿಕಾರಿಯನ್ನು ತಕ್ಷಣವೆ ಅಮಾನತು ಮಾಡಲಾಗಿದೆ’ ಎಂದು ಹೇಳಿದ್ದಾರೆ.

ಈ ನಡುವೆ, ಶುಕ್ರವಾರ ರಾತ್ರಿ ವೈದ್ಯೆಯನ್ನು ಅವರ ತವರು ಜಿಲ್ಲೆಯಾದ ಬೀಡ್‌ನ ವಡ್ವಾನಿ ತಾಲೂಕಿನಲ್ಲಿರುವ ಅವರ ಸ್ವಂತ ಜಮೀನಿಯಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.

ಆರೋಪಿಗಳನ್ನು ಗಲ್ಲಿಗೇರಿಸಿ: ಸಂಬಂಧಿಕರು

ಆತ್ಮಹತ್ಯೆ ಮಾಡಿಕೊಂಡ ಸರ್ಕಾರಿ ವೈದ್ಯೆಯ ಸಾವಿಗೆ ಕಾರಣಕರ್ತರಾದ ಪೊಲೀಸ್ ಅಧಿಕಾರಿ ಹಾಗೂ ಎಂಜಿನಿಯರ್‌ಗೆ ಮರಣದಂಡನೆ ವಿಧಿಸಬೇಕು ಎಂದು ಅವರ ಸಂಬಂಧಿಕರು ಆಗ್ರಹಿಸಿದ್ದಾರೆ. ತನ್ನ ಮೇಲೆ ನಡೆಯುತ್ತಿದ್ದ ಕಿರುಕುಳದ ಬಗ್ಗೆ ಸಂತ್ರಸ್ತ ವೈದ್ಯೆ ಹಲವು ಬಾರಿ ದೂರಿಕೊಂಡಿದ್ದರೂ ಅದನ್ನು ನಿರ್ಲಕ್ಷಿಸಲಾಗಿತ್ತು ಎಂದು ಅವರ ಸಂಬಂಧಿಕರು ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡುತ್ತಾ ಆರೋಪಿಸಿದ್ದಾರೆ.

ವೈದ್ಯರೂ ಆಗಿರುವ ಮೊತ್ತೊಬ್ಬ ಸಂಬಂಧಿ ಮಾತನಾಡುತ್ತಾ ‘ಘಟನೆ ಬಗ್ಗೆ ನಮಗೆ ಪೊಲೀಸರು ತಿಳಿಸಿದ್ದರಿಂದ ನಾವು ಆಸ್ಪತ್ರೆಗೆ ತೆರಳಿದೆವು. ನಾನು ವೈದ್ಯ ಆಗಿರುವುದರಿಂದ ಶವಪರೀಕ್ಷೆಗೆ ನಾನೂ ಹಾಜರಾಗುತ್ತೇನೆ ಎಂದು ಅವರಿಗೆ ತಿಳಿಸಿದೆ. ಈ ವೇಳೆ ಅವರ ಅಂಗೈನಲ್ಲಿನ ಟಿಪ್ಪಣಿಯನ್ನು ಗಮನಿಸಿ ಅದನ್ನು ಪೊಲೀಸರಿಗೆ ತಿಳಿಸಿದೆ’ ಎಂದು ಹೇಳಿದ್ದಾರೆ.

‘ಮೃತ ವೈದ್ಯೆ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ವೈದ್ಯಕೀಯ ವರದಿಯನ್ನು ಬದಲಾಯಿಸುವಂತೆ ಫಲ್ಟಣ್‌ನ ರಾಜಕಾರಣಿಗಳು ಅವರ ಮೇಲೆ ಒತ್ತಡ ಹೇರುತ್ತಿದ್ದರು. ಆರೋಪಿಗಳನ್ನು ಬಂಧಿಸುವುದು ಮಾತ್ರವಲ್ಲ ಅವರನ್ನು ಗಲ್ಲಿಗೇರಿಸಬೇಕು’ ಎಂದು ಮತ್ತೊಬ್ಬ ಸಂಬಂಧಿ ಹೇಳಿದ್ದಾರೆ. 

ತಪ್ಪಿತಸ್ಥರನ್ನು ಶಿಕ್ಷಿಸಿ: ವೈದ್ಯರ ಸಂಘಗಳ ಆಗ್ರಹ
ಅತ್ಯಾಚಾರ ಮತ್ತು ಮಾನಸಿಕ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆಗೈದ ವೈದ್ಯಯ ಸಾವಿನ ಪ‍್ರಕರಣದ ಬಗ್ಗೆ ಭಾರತೀಯ ವೈದ್ಯಕೀಯ ಸಂಘ–ಮಹಾರಾಷ್ಟ್ರ ರಾಜ್ಯ (ಐಎಂಎ) ಮತ್ತು ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟ (ಎಫ್‌ಎಐಎಂಎ) ಆಕ್ರೋಶ ವ್ಯಕ್ತಪಡಿಸಿದೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಮಾಹಿತಿ ಬಹಿರಂಗಪಡಿಸುವವರಿಗೆ ರಕ್ಷಣೆ ಒದಗಿಸಬೇಕು ಎಂದು ಸಂಘಗಳು ಒತ್ತಾಯಿಸಿವೆ. 

ಸಂಸದನ ವಿರುದ್ಧ ಕ್ರಮ ಕೈಗೊಳ್ಳಿ: ಬಿಜೆಪಿ ಶಾಸಕ

ಫಲ್ಟಣ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ವೈದ್ಯೆಯ ಮೇಲೆ ಒತ್ತಡ ಹೇರಲು ಯತ್ನಿಸಿದ ಸಂಸದನನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಬೇಕು ಎಂದು ಬಿಜೆಪಿ ಶಾಸಕ ಸುರೇಶ್ ಧಸ್ ಅವರು ಶನಿವಾರ ಆಗ್ರಹಿಸಿದ್ದಾರೆ.

‘ವೈದ್ಯೆಗೆ ಬೆದರಿಸಿದ ಸಂಸದ ಮತ್ತು ಅವರ ಸಹಾಯಕ ಯಾರು ಎಂದು ತನಿಖೆಯಿಂದ ಬಹಿರಂಗವಾಗುತ್ತದೆ.  ಅವರು ಯಾರೇ ಆಗಲಿ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದರೆ ಅವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿಸಬೇಕು’ ಎಂದು ಶಾಸಕ ಧಸ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.