ADVERTISEMENT

ಪಾಕ್‌ನಿಂದ ದಾರಿ ತಪ್ಪಿಸುವ ಚಿತ್ರಗಳ ಪ್ರಸಾರ: ಭಾರತೀಯ ಸೇನೆ

ಪಿಟಿಐ
Published 2 ಜನವರಿ 2026, 16:15 IST
Last Updated 2 ಜನವರಿ 2026, 16:15 IST
ಭಾರತೀಯ ಸೇನೆ
ಭಾರತೀಯ ಸೇನೆ   

ನವದೆಹಲಿ: ‘ಆಪರೇಷನ್‌ ಸಿಂಧೂರದ’ ವೇಳೆ ಪಂಜಾಬ್‌ನಲ್ಲಿ ಭಾರತೀಯ ಸೇನಾ ಸೌಲಭ್ಯಗಳ ಮೇಲೆ ದಾಳಿ ನಡೆಸಲಾಗಿದೆ ಎಂಬ ದಾರಿತಪ್ಪಿಸುವ ಚಿತ್ರಗಳನ್ನು ಕೆಲ ಪಾಕಿಸ್ತಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುತ್ತಿದ್ದಾರೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ಹೇಳಿದ್ದಾರೆ. 

ಪರಿಶೀಲನೆ ನಡೆಸದ ಉಪಗ್ರಹ ಚಿತ್ರಗಳನ್ನು ಪ್ರಸಾರ ಮಾಡುವ ಮೂಲಕ ತಮ್ಮ ವಿಫಲವಾದ ನಿರೂಪಣೆಯನ್ನು ಮತ್ತೆ ಪ್ರಚಾರ ಪಡಿಸುವ ಉದ್ದೇಶ ಇದರ ಹಿಂದೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ. 

ಆದರೆ ಈ ಚಿತ್ರಗಳಲ್ಲಿ ತೋರಿಸಿರುವ ಸ್ಥಳಗಳಲ್ಲಿ ಯಾವುದೇ ರೀತಿಯ ವಿನಾಶ ಅಥವಾ ಹಾನಿ ಆಗಿಲ್ಲ ಎಂಬುದು ಸ್ವತಂತ್ರ ಪರಿಶೀಲನೆಯಿಂದ ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ. 

ADVERTISEMENT

ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಕಳೆದ ವರ್ಷದ ಮೇ 7ರಂದು ‘ಆಪರೇಷನ್‌ ಸಿಂಧೂರ’ ಪ್ರಾರಂಭಿಸಿತು. ಈ ಮೂಲಕ ಪಾಕಿಸ್ತಾನದ ಜತೆಗೆ ನಾಲ್ಕು ದಿನಗಳವರೆಗೆ ಸೇನಾ ಸಂಘರ್ಷ ನಡೆದಿತ್ತು.  

‘ಕೆಲ ಪಾಕಿಸ್ತಾನಿಯರು ಹತಾಶ ಪ್ರಯತ್ನದ ಭಾಗವಾಗಿ ತಪ್ಪು ಮಾಹಿತಿ ಅಭಿಯಾನ ನಡೆಸುತ್ತಿದ್ದಾರೆ. ಆದರೆ ಅದನ್ನು ಬೆಂಬಲಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ’ ಎಂದು ಸೇನಾ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.  

‘ನಿಜವಾದ ದಾಖಲೆಗಳನ್ನು ಪ್ರಸ್ತುತಪಡಿಸುವ ಬದಲಿಗೆ, ಪುರಾವೆಗಳನ್ನು ಸೃಷ್ಟಿಸಲು ನಡೆಸಿರುವ ಯತ್ನವನ್ನು ಇದು ಬಹಿರಂಗಪಡಿಸುತ್ತದೆ. ಏಳು ತಿಂಗಳ ಬಳಿಕ ಹಠಾತ್ತನೆ ಈ ಚಿತ್ರಗಳು ಹೊರಬಂದಿವೆ. ಆದರೆ ಅವುಗಳ ನಿಖರ ಕಾಲಾವಧಿಯ ಪರಿಶೀಲನೆ ಆಗಿಲ್ಲ. ಉಪಗ್ರಹ ಮೂಲದ ವಿವರಗಳನ್ನು ತಿಳಿಸಲಾಗಿಲ್ಲ. ಜತೆಗೆ ಅವು ದೃಢೀಕೃತ ಚಿತ್ರಗಳೂ ಅಲ್ಲ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.