ಶ್ರೀನಗರ: ನಗರದ ಹೊರವಲಯದ ದಾಚೀಗಾಮ್‌ನಲ್ಲಿ ‘ಆಪರೇಷನ್ ಮಹಾದೇವ‘ ಹೆಸರಿನಲ್ಲಿ ಭದ್ರತಾ ಪಡೆ ಸಿಬ್ಬಂದಿ ಸೋಮವಾರ ಕಾರ್ಯಾಚರಣೆ ನಡೆಸಿ, ಪಹಲ್ಗಾಮ್ ದಾಳಿಯ ರೂವಾರಿ ಸೇರಿದಂತೆ ಪಾಕಿಸ್ತಾನದ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಮೃತ ಉಗ್ರರನ್ನು ಹಸೀಮ್ ಮುಸಾ ಅಲಿಯಾಸ್ ಸುಲೇಮಾನ್, ಪಾಕಿಸ್ತಾನದ ಯಾಸಿರ್ ಹಾಗೂ ಅಬು ಹಮ್ಜಾ ಎಂದು ಗುರುತಿಸಲಾಗಿದೆ. ಉಗ್ರ ಹಸೀಮ್ ಅಲಿಯಾಸ್ ಸುಲೇಮಾನ್ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯ ರೂವಾರಿಯಾಗಿದ್ದ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ಉಗ್ರರು ಬಳಸಿದ್ದ ಸಾಧನವನ್ನೇ ಹೋಲುವ ತಾಂತ್ರಿಕ ಸಿಗ್ನಲ್ ಪತ್ತೆಯಾದ ಹಿನ್ನೆಲೆಯಲ್ಲಿ ಮುನ್ನಾರ್ ಗ್ರಾಮ ಹಾಗೂ ಹರ್ವನ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಯ ವಿಶೇಷ ಘಟಕದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಉಗ್ರರ ಹತ್ಯೆ ಮಾಡಲಾಗಿದೆ.
ಘಟನಾ ಸ್ಥಳದಿಂದ ಒಂದು ಎಂ–4 ಕಾರ್ಬೈನ್ ರೈಫಲ್, 2 ಎಕೆ–ರೈಫಲ್‌ಗಳು ಹಾಗೂ ಮದ್ದು–ಗುಂಡು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದ್ದು, ಅದು ಪೂರ್ಣಗೊಂಡ ಬಳಿಕ ಇತರೆ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು ಎಂದು ಕಾಶ್ಮೀರ ವಲಯದ ಐಜಿಪಿ ವಿ.ಕೆ. ಬಿದ್ರಿ ಹೇಳಿದ್ದಾರೆ.
ಸ್ಯಾಟಲೈಟ್ ಫೋನ್‌ನ ಸಿಗ್ನಲ್‌ನ ಸಹಾಯದಿಂದಾಗಿ ಭದ್ರತಾ ಪಡೆಗಳು ಪಹಲ್ಗಾಮ್ ದಾಳಿ ನಡೆಸಿದ್ದ ಉಗ್ರರ ಜಾಲವನ್ನು ಭೇದಿಸಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಪಹಲ್ಗಾಮ್‌ನಲ್ಲಿ ಲಷ್ಕರ್–ಎ–ತಯಬಾ ಉಗ್ರರು ಬಳಸಿದ್ದ ಹುವಾಯಿ ಸ್ಯಾಟಲೈಟ್ ಫೋನ್ ದಾಳಿಯ ಬಳಿಕ ಸ್ತಬ್ಧಗೊಂಡಿತ್ತು. ದಾಳಿ ನಡೆದ ಮೂರು ತಿಂಗಳ ಬಳಿಕ ಎರಡು ದಿನಗಳ ಹಿಂದಷ್ಟೇ ಫೋನ್ ಸಕ್ರಿಯವಾಗಿದೆ. ಭದ್ರತಾ ಪಡೆಗಳು ಫೋನ್ ಸಿಗ್ನಲ್ ಸುಳಿವು ಹಿಡಿದು ಹೊರಟಾಗ ದಾಚೀಗಾಮ್‌ನ ಅರಣ್ಯ ಪ್ರದೇಶದಲ್ಲಿನ ಉಗ್ರರ ಜಾಲ ಪತ್ತೆಯಾಯಿತು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.