ADVERTISEMENT

ವಿಜಯ್ ಮಲ್ಯ ಪ್ರಕರಣ ವಿಚಾರಣೆ ನಾಳೆಗೆ ಮುಂದೂಡಿದ ಸುಪ್ರೀಂ ಕೋರ್ಟ್

ಕೋರ್ಟ್ ಆದೇಶ ಮೀರಿ ಮಕ್ಕಳಿಗೆ ಹಣ ವರ್ಗಾವಣೆ– ನ್ಯಾಯಾಂಗ ನಿಂದನೆ ಪ್ರಕರಣ

ಪಿಟಿಐ
Published 9 ಮಾರ್ಚ್ 2022, 10:57 IST
Last Updated 9 ಮಾರ್ಚ್ 2022, 10:57 IST
ವಿಜಯ್ ಮಲ್ಯ – ಪಿಟಿಐ ಚಿತ್ರ
ವಿಜಯ್ ಮಲ್ಯ – ಪಿಟಿಐ ಚಿತ್ರ   

ನವದೆಹಲಿ: ₹9 ಸಾವಿರ ಕೋಟಿಗೂ ಅಧಿಕ ಮೊತ್ತದ ಬ್ಯಾಂಕ್‌ ಸಾಲವಂಚನೆ ಪ್ರಕರಣದ ಆರೋಪಿ, ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಗುರುವಾರಕ್ಕೆ ಮುಂದೂಡಿದೆ.

ನ್ಯಾಯಮೂರ್ತಿಗಳಾದ ಯು.ಯು. ಲಲಿತ್, ಎಸ್. ರವೀಂದ್ರ ಭಟ್ ಮತ್ತು ಪಿ.ಎಸ್. ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠವು ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.

ಹಿರಿಯ ವಕೀಲ ಮತ್ತು ಅಮಿಕಸ್ ಕ್ಯೂರಿ ಜೈದೀಪ್ ಗುಪ್ತಾ ಅವರು ಮತ್ತೊಂದು ಪ್ರಕರಣದ ವಾದದಲ್ಲಿ ನಿರತರಾಗಿರುವ ಕಾರಣ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದರು.

ADVERTISEMENT

ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ತನ್ನ ಮಕ್ಕಳಿಗೆ ₹ 40 ಲಕ್ಷ ವರ್ಗಾಯಿಸಿದ್ದಕ್ಕಾಗಿ ಮಲ್ಯ ಅವರು 2017ರ ತೀರ್ಪನ್ನು ಮರುಪರಿಶೀಲಿಸುವಂತೆ ಮಾಡಿದ ಮನವಿಯನ್ನು 2020ರಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಈ ಪ್ರಕರಣದಲ್ಲಿ ಮಲ್ಯ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ, ಕಡ್ಡಾಯವಾಗಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿತ್ತು.

ಫೆಬ್ರವರಿ 10ರಂದು ಸುಪ್ರೀಂಕೋರ್ಟ್, ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಿ, ವೈಯಕ್ತಿಕವಾಗಿ ಅಥವಾ ಅವರ ವಕೀಲರ ಮೂಲಕ ಹಾಜರಾಗಲು ಕೊನೆಯ ಅವಕಾಶವನ್ನು ನೀಡಿತ್ತು.

‘ಮಲ್ಯ ಅವರಿಗೆ ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗಲು ಹಲವು ಅವಕಾಶಗಳನ್ನು ನೀಡಿದ್ದೇವೆ ಮತ್ತು 2021ರ ನ. 30ರಂದು ಸುಪ್ರೀಂಕೋರ್ಟ್ ತನ್ನ ಕೊನೆಯ ಆದೇಶದಲ್ಲಿ ನಿರ್ದಿಷ್ಟ ನಿರ್ದೇಶನಗಳನ್ನು ಸಹ ನೀಡಿದೆ’ ಎಂದು ಪೀಠ ಹೇಳಿತ್ತು.

ತಪ್ಪಿತಸ್ಥರೆಂದು ಸಾಬೀತಾಗಿರುವ ಮಲ್ಯ ಅವರು ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಹಾಗಾಗಿ ಅವರಿಗೆ ಶಿಕ್ಷೆ ವಿಧಿಸಬೇಕೆಂದು ಜೈದೀಪ್ ಗುಪ್ತಾ ಅವರು ವಾದ ಮಂಡಿಸಿದ್ದಾರೆ.

ವಿಜಯ್ ಮಲ್ಯ 2016ರಿಂದ ಬ್ರಿಟನ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.