ADVERTISEMENT

ವಿವಾಹೇತರ ಗರ್ಭಧಾರಣೆ ಹಾನಿಕಾರಕ: ಸುಪ್ರೀಂ ಕೋರ್ಟ್

ಗುಜರಾತ್‌ನ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಪಿಟಿಐ
Published 21 ಆಗಸ್ಟ್ 2023, 12:01 IST
Last Updated 21 ಆಗಸ್ಟ್ 2023, 12:01 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಅತ್ಯಾಚಾರ ಸಂತ್ರಸ್ತೆಯ 27 ವಾರಗಳ ಗರ್ಭದ ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ ಮಾಡಿಕೊಟ್ಟಿರುವ ಸುಪ್ರೀಂ ಕೋರ್ಟ್, ಈ ಕುರಿತಂತೆ ಗುಜರಾತ್ ಹೈಕೋರ್ಟ್‌ನ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಸಂತ್ರಸ್ತೆಯ ವೈದ್ಯಕೀಯ ವರದಿಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠವು, ಗರ್ಭಪಾತದ ಮನವಿಯನ್ನು ತಿರಸ್ಕರಿಸಿದ ಗುಜರಾತ್ ಹೈಕೋರ್ಟ್‌ನ ನಿರ್ಧಾರ ಸರಿಯಲ್ಲ ಎಂದು ಹೇಳಿದೆ.

ಅತ್ಯಾಚಾರ ಸಂತ್ರಸ್ತೆ ಮಗುವನ್ನು ಹೆರುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಆಗಸ್ಟ್ 19ರಂದು ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶದ ಕುರಿತಂತೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ. ಇದು ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯ ಪೀಠ ಹೇಳಿದೆ.

ADVERTISEMENT

ಭಾರತೀಯ ಸಮಾಜದ ಮದುವೆ ವಿಧಾನದಲ್ಲಿ ಗರ್ಭ ಧರಿಸುವುದು ದಂಪತಿಗೆ ಮಾತ್ರ ಖುಷಿ ಮತ್ತು ಸಂಭ್ರಮದ ವಿಚಾರವಲ್ಲ. ಕುಟುಂಬದ ಸದಸ್ಯರು ಮತ್ತ ಸ್ನೇಹಿತರಿಗೂ ಸಂತಸದ ವಿಷಯವೇ ಆಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಮದುವೆ ಆಗದೆ ಗರ್ಭಧಾರಣೆಯು ಹಾನಿಕಾರಕವಾಗಿದೆ. ಅದರಲ್ಲೂ ಲೈಂಗಿಕ ದೌರ್ಜನ್ಯದ ಸಂದರ್ಭಗಳಲ್ಲಿ ಗರ್ಭ ಧರಿಸುವುದು ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಒತ್ತಡದ ಮತ್ತು ಆಘಾತಕಾರಿ ಸಂಗತಿಯಾಗಿದೆ ಎಂದು ಕೋರ್ಟ್ ಹೇಳಿದೆ. ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಅತ್ಯಂತ ನೋವಿನ ವಿಷಯ. ಹೀಗಿರುವಾಗ, ಲೈಂಗಿಕ ಕಿರುಕುಳದಿಂದ ಗರ್ಭ ಧರಿಸುವುದು ಹಾನಿಕಾರಕವಾಗಿದೆ. ಏಕೆಂದರೆ, ಆ ಗರ್ಭವು ಸ್ವಇಚ್ಛೆಯಿಂದ ಮಾಡಿಕೊಂಡಿರುವುದಾಗಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

‘ಈ ವಿಷಯಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವರದಿ ಆಧರಿಸಿ ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಗರ್ಭಪಾತಕ್ಕೆ ನಾವು ಅವಕಾಶ ನೀಡುತ್ತಿದ್ದೇವೆ. ನಾಳೆ ಆಕೆ ಆಸ್ಪತ್ರೆಗೆ ತೆರಳಿ ಗರ್ಭಪಾತದ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸುತ್ತಿದ್ದೇವೆ’ ಎಂದು ಪೀಠ ಹೇಳಿದೆ.

ಭ್ರೂಣ ಜೀವಂತವಾಗಿದ್ದರೆ ಅದಕ್ಕೆ ಬೇಕಾದ ಆರೈಕೆಯನ್ನು ಆಸ್ಪತ್ರೆ ಮಾಡಬೇಕು. ಆ ಮಗುವಿನ ದತ್ತು ಕುರಿತಾದ ಪ್ರಕ್ರಿಯೆಗಳನ್ನು ಸರ್ಕಾರ ನಡೆಸಬೇಕು ಎಂದು ನ್ಯಾಯ ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.