ADVERTISEMENT

ವಾಯುಮಾಲಿನ್ಯ: ದೆಹಲಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್

ಪಿಟಿಐ
Published 2 ಡಿಸೆಂಬರ್ 2021, 20:14 IST
Last Updated 2 ಡಿಸೆಂಬರ್ 2021, 20:14 IST
ದೆಹಲಿ ವಾಯುಮಾಲಿನ್ಯ, ಸಾಂದರ್ಭಿಕ ಚಿತ್ರ
ದೆಹಲಿ ವಾಯುಮಾಲಿನ್ಯ, ಸಾಂದರ್ಭಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬಿಗಡಾಯಿಸಿರುವವಾಯುಮಾಲಿನ್ಯದ ಬಗ್ಗೆ ಸುಪ್ರೀಂಕೋರ್ಟ್‌ ಗುರುವಾರ ದೆಹಲಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

‘ನೀವು ಏನು ಮಾಡುತ್ತಿರೋ ಗೊತ್ತಿಲ್ಲ. ಮುಂದಿನ 24 ಗಂಟೆಯಲ್ಲಿ ದೆಹಲಿ ವಾಯುಮಾಲಿನ್ಯ ತಗ್ಗಿಸಲು ಕೈಗೊಳ್ಳುವ ಸ್ಪಷ್ಟ ಚಿತ್ರಣವನ್ನು ನಮ್ಮ ಮುಂದೆ ಇಡಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ಅವರು ಕೇಜ್ರಿವಾಲ್ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

ದೆಹಲಿ ವಾಯುಮಾಲಿನ್ಯ ನಿಯಂತ್ರಣದಲ್ಲಿ ಸರ್ಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಲು ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯಯನ್ನು ಎನ್‌.ವಿ ರಮಣ, ನ್ಯಾ. ಡಿ.ವೈ ಚಂದ್ರಚೂಡ ಹಾಗೂ ನ್ಯಾ. ಸೂರ್ಯಕಾಂತ್ ಅವರನ್ನೊಳಗೊಂಡ ವಿಶೇಷ ಪೀಠ ನಡೆಸಿತು.

ADVERTISEMENT

‘ನಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯುವ ಕೆಲಸವನ್ನು ಮಾಡಬೇಡಿ. ನೀವು ಏನು ಮಾಡುತ್ತಿರೋ ನಮಗೆ ಗೊತ್ತಿಲ್ಲ. ಮುಂದಿನ 24 ಗಂಟೆಯೊಳಗೆ ವಾಯುಮಾಲಿನ್ಯ ನಿಯಂತ್ರಣ ಮಾಡಲು ಏನು ಮಾಡುತ್ತಿರಿ? ಎಂಬ ಬಗ್ಗೆ ಸ್ಪಷ್ಟ ವರದಿಯನ್ನು ನಮ್ಮ ಮುಂದೆ ಇಡಬೇಕು’ ಎಂದು ಪೀಠ ಹೇಳಿದೆ.

‘ನಾವು ನಿಮ್ಮ ಅಧಿಕಾರಿ ವರ್ಗದವರಿಗೆ ವಿಶೇಷ ಶಕ್ತಿ ನೀಡಲು ಸಾಧ್ಯವಿಲ್ಲ. ಆದರೆ, ನೀವು ಮಾಲಿನ್ಯ ನಿಯಂತ್ರಣ ಮಾಡಲು ವಿಫಲವಾದರೇ ಕೋರ್ಟ್ ತಾನೇನು ಎಂದು ತೋರಿಸಲಿದೆ’ ಎಂಬ ಎಚ್ಚರಿಕೆಯನ್ನೂ ನ್ಯಾಯಮೂರ್ತಿಗಳು ಕೊಟ್ಟಿದ್ದಾರೆ.

ಆರ್‌.ಎಫ್ ನರಿಮನ್ ಅವರ ನೇತೃತ್ವದಲ್ಲಿ ದೆಹಲಿ ವಾಯುಮಾಲಿನ್ಯ ತಡೆಗೆ ಟಾಸ್ಕ್‌ ಫೋರ್ಸ್‌ ಒಂದನ್ನು ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಸುಪ್ರೀಂಗೆ ಮನವಿ ಮಾಡಿದ್ದಾರೆ.

ದೆಹಲಿ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡಿಸಿ, ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಆದರೆ, ಈ ಬಗ್ಗೆ ಗರಂ ಆದ ಎನ್.ವಿ. ರಮಣ ಅವರು, ‘ರೆಡ್ ಲೈಟ್ ಆನ್, ಗಾಡಿ ಆಫ್ ಘೋಷಣೆ ಕೇವಲ ಪ್ರಚಾರ ಆಗಿದೆ ಹೊರತು, ಇದರಿಂದ ಯಾವುದೇ ಪ್ರಯೋಜನ ಆಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಪ್ರಕರಣದ ವಿಚಾರಣೆಯನ್ನು ಪೀಠ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಮುಂದೂಡಿತು.

ದೆಹಲಿ ಶಾಲೆ: ಭೌತಿಕ ತರಗತಿ ಬಂದ್‌

ನವದೆಹಲಿ (ಪಿಟಿಐ): ವಾಯುಮಾಲಿನ್ಯ ಹೆಚ್ಚಳದ ಕಾರಣ ದೆಹಲಿ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಶುಕ್ರವಾರದಿಂದ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಗುರುವಾರ ತಿಳಿಸಿದ್ದಾರೆ.

ಆನ್‌ಲೈನ್‌ ತರಗತಿಗಳು ಮುಂದುವರಿಯಲಿವೆ. ಬೋರ್ಡ್‌ ಪರೀಕ್ಷೆಗಳು ನಿಗದಿತ ವೇಳಾಪಟ್ಟಿಯಂತೆ ನಡೆಯಲಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.