ADVERTISEMENT

ದೇಶದ್ರೋಹ ಕಾನೂನು ಅಮಾನತು ಸಾಧ್ಯವೇ?: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

24 ತಾಸುಗಳಲ್ಲಿ ಪ್ರತಿಕ್ರಿಯೆ ನೀಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಮೇ 2022, 16:01 IST
Last Updated 10 ಮೇ 2022, 16:01 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 124ಎ (ದೇಶದ್ರೋಹ) ಅಡಿಯಲ್ಲಿ ಇರುವ ದಂಡನೆಯ ಅವಕಾಶವನ್ನು ಕಾನೂನಿನ ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಅಮಾನತಿನಲ್ಲಿ ಇರಿಸುವುದು ಸಾಧ್ಯವೇ ಎಂಬುದನ್ನು 24 ತಾಸುಗಳೊಳಗೆ ತಿಳಿಸಬೇಕು ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಸೂಚಿಸಿದೆ.

ಈ ಕಾಯ್ದೆಯ ಅಡಿಯಲ್ಲಿ ದಾಖಲಾಗಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಗತಿ ಏನು ಎಂದೂ ಕೋರ್ಟ್‌ ಪ್ರಶ್ನಿಸಿದೆ.

ಈ ಸೆಕ್ಷನ್‌ ಅನ್ನು ಮರುಪರಿಶೀಲನೆಗೆ ಒಳಪಡಿಸಲಾಗುವುದು. ಹಾಗಾಗಿ, ಈ ಸೆಕ್ಷನ್‌ನ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ ಅನ್ನು ಕೋರಿತ್ತು.

ADVERTISEMENT

ದೇಶದ್ರೋಹ ಕಾನೂನಿನ ದುರ್ಬಳಕೆಯಿಂದ ಜನರನ್ನು ರಕ್ಷಿಸುವುದು ಅಗತ್ಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಹೇಳಿದೆ.

‘ನಾವು ವಿವೇಕಯುತವಾಗಿಲ್ಲ ಎಂದು ತೋರುವಂತೆ ಇರಬಾರದು. ಈಗ ಹಲವು ಕಳವಳಗಳು ಉಂಟಾಗಿವೆ. ಅದರಲ್ಲೊಂದು ಬಾಕಿ ಇರುವ ಪ್ರಕರಣಗಳು ಮತ್ತು (ಸೆಕ್ಷನ್‌ನ) ದುರ್ಬಳಕೆ. ಹನುಮಾನ್‌ ಚಾಲೀಸಾ ಪಠಿಸಿದವರ ವಿರುದ್ಧವೂ ಈ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಟಾರ್ನಿ ಜನರಲ್‌ ನಿನ್ನೆ ಹೇಳಿದ್ದರು. ಈ ಎಲ್ಲದರಿಂದ ರಕ್ಷಣೆ ಪಡೆಯುವುದು ಹೇಗೆ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರನ್ನು ಪೀಠವು ಪ್ರಶ್ನಿಸಿದೆ.

ಎಫ್‌ಐಆರ್ ದಾಖಲು ಮತ್ತು ತನಿಖೆಯು ರಾಜ್ಯ ಮಟ್ಟದಲ್ಲಿ ನಡೆಯುತ್ತದೆ. ದುರ್ಬಳಕೆ ಆದರೆ ಸಾಂವಿಧಾನಿಕವಾದ ಪರಿಹಾರ ಇದೆ ಎಂದು ಮೆಹ್ತಾ ಹೇಳಿದರು. ಆದರೆ, ಇದು ಪೀಠಕ್ಕೆ ಸಮಾಧಾನ ತರಲಿಲ್ಲ. ‘ಎಲ್ಲರೂ ಕೋರ್ಟ್‌ಗೆ ಹೋಗಿ ಮತ್ತು ಕೆಲ ಕಾಲ ಸೆರೆಮನೆಯಲ್ಲಿ ಇರಿ ಎಂದು ನಾವು ಹೇಳಲಾಗದು. ಸೆಕ್ಷನ್‌ನ ದುರ್ಬಳಕೆ ಆಗುತ್ತಿದೆ ಎಂಬುದರತ್ತ ಸರ್ಕಾರವೇ ಬೊಟ್ಟು ಮಾಡಿರುವಾಗ, ಜನರನ್ನು ನೀವು ಹೇಗೆ ರಕ್ಷಿಸುವಿರಿ’ ಎಂದು ಪೀಠವು ಮೆಹ್ತಾ ಅವರನ್ನು ಪ್ರಶ್ನಿಸಿದೆ.

ಸೆಕ್ಷನ್‌ನ ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ, ಸೆಕ್ಷನ್‌ ಅನ್ನು ಅಮಾನತಿನಲ್ಲಿ ಇರಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡುವುದನ್ನು ಪರಿಶೀಲಿಸಿ ಎಂದು ಪೀಠವು ಹೇಳಿದೆ.

ಸರ್ಕಾರದ ನಿಲುವು ಏನೇ ಇರಲಿ, ಸೆಕ್ಷನ್‌ನ ಸಿಂಧುತ್ವದ ಪರಿಶೀಲನೆಯನ್ನು ಕೋರ್ಟ್‌ ಮುಂದುವರಿಸಬೇಕು ಎಂದು ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.