ADVERTISEMENT

ಸಿಬಿಐಗೆ ನಿರ್ದೇಶಕರ ನೇಮಕ: ಮೇ 2ರೊಳಗೆ ಉನ್ನತಾಧಿಕಾರ ಸಮಿತಿ ಸಭೆ

ಪಿಟಿಐ
Published 5 ಏಪ್ರಿಲ್ 2021, 12:09 IST
Last Updated 5 ಏಪ್ರಿಲ್ 2021, 12:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸಿಬಿಐಗೆ ನಿರ್ದೇಶಕರ ನೇಮಕಾತಿ ಕುರಿತಂತೆ ಪ್ರಧಾನಮಂತ್ರಿ ಮತ್ತು ಇತರ ಸದಸ್ಯರು ಇರುವ ಉನ್ನತಾಧಿಕಾರ ಸಮಿತಿ ಸಭೆಯನ್ನು ಮೇ 2ರೊಳಗೆ ಕರೆಯಲು ಪರಿಶೀಲಿಸುವಂತೆ ಸುಪ್ರಿಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ‘ಈ ಹುದ್ದೆಗೆ ಪ್ರಭಾರ ವ್ಯವಸ್ಥೆ ನಡೆಯದು’ ಎಂದು ಹೇಳಿತು.

ಕೇಂದ್ರ ಸರ್ಕಾರರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, 2ರೊಳಗೆ ಸಭೆ ಕರೆಯಲಾಗುವುದು ಎಂದು ನ್ಯಾಯಮೂರ್ತಿಗಳಾದ ಎಲ್‍.ನಾಗೇಶ್ವರರಾವ್‍ ಮತ್ತು ವಿನೀತ್ ಶರಣ್‍ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿತು. ಸಮಿತಿಯಲ್ಲಿ ಪ್ರಧಾನಮಂತ್ರಿ ಹೊರತುಪಡಿಸಿ ಅತಿದೊಡ್ಡ ವಿರೋಧಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ಹೆಸರಿಸುವ ನ್ಯಾಯಮೂರ್ತಿ ಇರುತ್ತಾರೆ.

ಈ ಬಗ್ಗೆ ಅರ್ಜಿ ಸಲ್ಲಿಸಿದ್ದ ಸ್ವಯಂ ಸೇವಾ ಸಂಸ್ಥೆ ‘ಕಾಮನ್‍ ಕ್ಹಾಸ್‍‘ ಪರ ವಾದಿಸಿದ ವಕೀಲ ಪ್ರಶಾಂತ್‍ ಭೂಷಣ್ ಅವರು, ‘ಇದೇ 23ರಂದು ನಿವೃತ್ತರಾಗಲಿರುವ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ ಅವರ ‘ಗೈರು ಹಾಜರಿಯನ್ನು ಕೇಂದ್ರ ಬಯಸುತ್ತಿದೆ.’ ಇದೇ ಕಾರಣಕ್ಕೆ ಸಭೆ ಕರೆಯುವುದನ್ನು ವಿಳಂಬ ಮಾಡುತ್ತಿದೆ’ ಎಂದು ಹೇಳಿದರು.

ADVERTISEMENT

ವಿಚಾರಣೆ ವೇಳೆ ಈ ಹುದ್ದೆಗೆ ಪ್ರಭಾರ ವ್ಯವಸ್ಥೆಯೇ ನಡೆಯದು ಎಂದು ಮೌಖಿಕವಾಗಿ ಹೇಳಿದ ಪೀಠವು, ಪ್ರಶಾಂತ್‍ ಭೂಷಣ್‍ ಅವರ ಮಾತಿನಲ್ಲಿ ತಿರುಳಿದೆ ಎಂದು ಅಭಿಪ್ರಾಯಪಟ್ಟಿತು. ಅಟಾರ್ನಿ ಜನರಲ್‍ ಕೆ.ಕೆ.ವೇಣುಗೋಪಾಲ್‍ ಅವರು, ಸದ್ಯ ಹಿರಿಯ ಅಧಿಕಾರಿಯನ್ನು ಸಿಬಿಐಗೆ ಹಂಗಾಮಿ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದರು.

ವಿಚಾರಣೆ ವೇಳೆ ಹಾಜರಿದ್ದ ಸಾಲಿಸಿಟರ್ ಜನರಲ್‍ ತುಷಾರ್ ಮೆಹ್ತಾ ಅವರು, ಅರ್ಜಿದಾರರ ವಾದವನ್ನು ಅಸಂಬಂದ್ಧ ಎಂದು ಬಣ್ಣಿಸಿದರು. ನಿರ್ಲಜ್ಜ ಮನಸ್ಥಿತಿ ನಾಗರಿಕರು ವ್ಯಕ್ತಿ, ಸಂಸ್ಥೆಗಳ ಮೇಲೆ ಬೇಕಾಬಿಟ್ಟಿ ಆರೋಪ ಮಾಡುತ್ತಾರೆ ಎಂದು ಪ್ರತಿಪಾದಿಸಿದರು. ಪ್ರಕರಣದ ವಿಚಾರಣೆಯನ್ನು ಪೀಠವು ಏಪ್ರಿಲ್‍ 16ಕ್ಕೆ ನಿಗದಿಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.