ADVERTISEMENT

ದೆಹಲಿಯಲ್ಲಿ ಅಂತರರಾಜ್ಯ ಚಟುವಟಿಕೆ: ಸಭೆ ಕರೆಯಲು ಕೇಂದ್ರಕ್ಕೆ ಸುಪ್ರೀಂ ಆದೇಶ

ಏಜೆನ್ಸೀಸ್
Published 4 ಜೂನ್ 2020, 13:33 IST
Last Updated 4 ಜೂನ್ 2020, 13:33 IST
ನವದೆಹಲಿಯ ಸಿಗ್ನೇಚರ್‌ ಬ್ರಿಡ್ಜ್‌
ನವದೆಹಲಿಯ ಸಿಗ್ನೇಚರ್‌ ಬ್ರಿಡ್ಜ್‌   

ನವದೆಹಲಿ: ಅಂತರರಾಜ್ಯ ಚಟುವಟಿಕೆಗಳನ್ನು ಸರಾಗಗೊಳಿಸುವ ಸಲುವಾಗಿ ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳ ಸಭೆ ಕರೆಯುವಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ಪ್ರದೇಶದ (ಎನ್‌ಸಿಆರ್) ಎಲ್ಲಾ ಗಡಿಗಳಲ್ಲಿ ಹಲವು ನಿರ್ಬಂಧಗಳನ್ನು ಹೇರಲಾಗಿದೆ.

ಎನ್‌ಸಿಆರ್‌ಯಲ್ಲಿ ಅನುಮತಿ ನೀಡಿರುವ ಚಟುವಟಿಕೆಗಳ ಮೇಲೆ ಹೇರಿದ ನಿರ್ಬಂಧಗಳ ಬಗೆಗಿನ ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, 'ಅಂತರರಾಜ್ಯ ಚಟುವಟಿಗಳಿಗೆ ಸಾಮಾನ್ಯ ಕಾರ್ಯಯೋಜನೆಯೊಂದನ್ನು ರಾಜ್ಯಗಳು ರೂಪಿಸಬೇಕು' ಎಂದು ಹೇಳಿದೆ.

ADVERTISEMENT

'ಪ್ರಸ್ತುತ ಪ್ರಕರಣದ ವಿಚಾರವಾಗಿ, ಭಾರತ ಸರ್ಕಾರವು ಸಂಬಂಧಪಟ್ಟ ರಾಜ್ಯ ಅಧಿಕಾರಿಗಳ ಸಭೆಯನ್ನು ಕರೆಯಬೇಕು. ಎನ್‌ಸಿಆರ್‌ ಪ್ರದೇಶದಲ್ಲಿ ಅಂತರರಾಜ್ಯ ಚಟುವಟಿಕೆಗಳನ್ನು ಸರಾಗಗೊಳಿಸುವ ಸಂಬಂಧ ಸಾಮಾನ್ಯ ಕಾರ್ಯಯೋಜನೆಯನ್ನು ಕಂಡುಹಿಡಿಯಲು ಪ್ರಯತ್ನಿಸಬೇಕು' ಎಂದು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಎಂ.ಆರ್. ಷಾ ಅವರನ್ನೂ ಒಳಗೊಂಡ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ವಿವಿಧ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರದಲ್ಲಿನ ವ್ಯತ್ಯಾಸದಿಂದಾಗಿ, ಸಾಮಾನ್ಯ ಜನರಿಗೆ ಸಾಕಷ್ಟು ಗೊಂದಲ ಮತ್ತು ತೊಂದರೆಗಳು ಉಂಟಾಗುತ್ತಿವೆ ಎಂದು ನ್ಯಾಯಪೀಠವು ತಿಳಿಸಿದೆ.

ಈ ವಿಚಾರವಾಗಿ ಕೇಂದ್ರ ಸರ್ಕಾರವು ಒಂದು ವಾರದೊಳಗೆ ದೆಹಲಿ, ಹರಿಯಾಣ, ಉತ್ತರ ಪ್ರದೇಶದ ರಾಜ್ಯ ಅಧಿಕಾರಿಗಳ ಸಭೆ ಕರೆಯಬೇಕೆಂದು ನ್ಯಾಯಪೀಠ ಹೇಳಿದೆ. ಜೂನ್ 12ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.