ADVERTISEMENT

ಲಾಕ್‌ಡೌನ್ | ವಿಮಾನ ಟಿಕೆಟ್ ಹಣ ಮರುಪಾವತಿಗೆ ದಾರಿ ಹುಡುಕಿ: ಸುಪ್ರೀಂ ನಿರ್ದೇಶನ

ಪಿಟಿಐ
Published 12 ಜೂನ್ 2020, 10:17 IST
Last Updated 12 ಜೂನ್ 2020, 10:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್–19 ಲಾಕ್‌ಡೌನ್ ಕಾರಣದಿಂದ ವಿಮಾನ ಸಂಚಾರ ರದ್ದಾಗಿದ್ದು, ಪ್ರಯಾಣಿಕರ ಮುಂಗಡ ಟಿಕೆಟ್ ಹಣವನ್ನು ಪೂರ್ಣ ಮರುಪಾವತಿ ಮಾಡುವ ವಿಧಾನಗಳ ಬಗ್ಗೆ ಚರ್ಚಿಸುವಂತೆ ಕೇಂದ್ರ ಸರ್ಕಾರ ಹಾಗೂ ವಿಮಾನಯಾನ ಕಂಪನಿಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ.

ಟಿಕೆಟ್ ಹಣ ಮರುಪಾವತಿ ಮಾರ್ಗಗಳನ್ನು ರೂಪಿಸುವ ಹಾಗೂ ಈ ವಿಷಯದ ಬಗ್ಗೆ ಸ್ಪಷ್ಟ ನಿಲುವು ತಳೆಯುವಂತೆ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಕೆ. ಕೌಲ್ ಮತ್ತು ಎಂ.ಆರ್. ಶಾ ಅವರ ಪೀಠ ಸೂಚನೆ ನೀಡಿತು.

ಕೋವಿಡ್‌ನಿಂದಾಗಿ ಜಾಗತಿಕ ವಿಮಾನಯಾನ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದ್ದು, ಎನ್‌ಜಿಒ ಹಾಗೂ ಪ್ರವಾಸಿ ಕಾನೂನು ಘಟಕ ಸಲ್ಲಿಸಿರುವ ಅರ್ಜಿಯಲ್ಲಿ ತಮ್ಮನ್ನೂ ಕಕ್ಷಿದಾರರನ್ನಾಗಿ ಪರಿಗಣಿಸುವಂತೆ ವಿಮಾನಯಾನ ಸಂಸ್ಥೆಗಳಿಂದ ಪ್ರತಿ ಅರ್ಜಿ ಸಲ್ಲಿಕೆಯಾಗಿದೆ. ಮೂರು ವಾರಗಳ ಬಳಿಕ ಅರ್ಜಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿತು.

ADVERTISEMENT

ಅಂತರರಾಷ್ಟ್ರೀಯ ಹಾಗೂ ದೇಶೀ ವಿಮಾನ ಪ್ರಯಾಣದ ಟಿಕೆಟ್ ಖರೀದಿ ಹಣವನ್ನು ಪ್ರಯಾಣಿಕರಿಗೆ ಮರುಪಾವತಿ ಮಾಡಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದಲಾಗಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ್ದ ಕೋರ್ಟ್‌, ಈ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರ ಹಾಗೂ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ (ಡಿಜಿಸಿಎ) ಸೂಚನೆ ನೀಡಿತ್ತು.

ವಿಮಾನಯಾನ ಸಂಸ್ಥೆಗಳು ಸಂಪೂರ್ಣ ಟಿಕೆಟ್ ಹಣವನ್ನು ಮರುಪಾವತಿ ಮಾಡದೇ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಸಂಸ್ಥೆಗಳು ಹಣ ಮರುಪಾವತಿ ಮಾಡುವ ಬದಲು, ಒಂದು ವರ್ಷದವರೆಗೆ ಅದೇ ಟಿಕೆಟ್‌ನಡಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸುವ ನಿಯಮ (ಕ್ರೆಡಿಟ್ ಶೆಲ್) ಜಾರಿ ಮಾಡಿರುವುದು ಡಿಜಿಸಿಎ ಹೊರಡಿಸಿದ ಮೇ 2008ರ ‘ನಾಗರಿಕ ವಿಮಾನಯಾನ ಅಗತ್ಯತೆ’ಯ ಉಲ್ಲಂಘನೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.