ADVERTISEMENT

ಮಲ್ಯ ಹಸ್ತಾಂತರ: ಆರು ವಾರದೊಳಗಾಗಿ ವರದಿಗೆ ಕೇಂದ್ರಕ್ಕೆ ‘ಸುಪ್ರೀಂ’ ಸೂಚನೆ

ಪಿಟಿಐ
Published 2 ನವೆಂಬರ್ 2020, 11:20 IST
Last Updated 2 ನವೆಂಬರ್ 2020, 11:20 IST
ವಿಜಯ್‌ ಮಲ್ಯ
ವಿಜಯ್‌ ಮಲ್ಯ   

ನವದೆಹಲಿ: ಭಾರತದ ಬ್ಯಾಂಕ್‌ಗಳಿಗೆ ವಂಚನೆ ಎಸಗಿ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್‌ನಲ್ಲಿ ಬಾಕಿ ಇರುವ ಪ್ರಕ್ರಿಯೆಯ ಕುರಿತು ಆರು ವಾರದೊಳಗಾಗಿ ಸ್ಥಿತಿಗತಿ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೋಮವಾರ ಸೂಚಿಸಿದೆ.

ಬ್ರಿಟನ್‌ನಲ್ಲಿ ಪ್ರತ್ಯೇಕ ‘ಗೋಪ್ಯ’ ಕಾನೂನು ಪ್ರಕ್ರಿಯೆಯೊಂದು ಪೂರ್ಣಗೊಳ್ಳದೇ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಸಾಧ್ಯವಿಲ್ಲ ಎಂದು ಅ.5ರಂದು ಕೇಂದ್ರ ಸರ್ಕಾವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿತ್ತು. ಈ ಪ್ರಕ್ರಿಯೆಯಲ್ಲಿ ಭಾರತ ಸರ್ಕಾರವು ಸಹಭಾಗಿಯಾಗಿರದೇ ಇರುವ ಕಾರಣ ಇದರ ಬಗ್ಗೆ ಮಾಹಿತಿ ಇಲ್ಲ ಎಂದೂ ಕೇಂದ್ರಸರ್ಕಾರ ತಿಳಿಸಿತ್ತು.

‘ಬ್ರಿಟನ್‌ನಲ್ಲಿ ಬಾಕಿ ಇರುವ ಪ್ರಕ್ರಿಯೆ ಪೂರ್ಣಗೊಳ್ಳಲು ಎಷ್ಟು ಕಾಲಾವಧಿ ಹಿಡಿದೀತು’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರನ್ನು ನ್ಯಾಯಮೂರ್ತಿಗಳಾದ ಯು.ಯು.ಲಲಿತ್‌ ಹಾಗೂ ಅಶೋಕ್‌ ಭೂಷಣ್‌ ಅವರಿದ್ದ ಪೀಠವು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮೆಹ್ತಾ, ‘ಲಂಡನ್‌ ಹೈ ಕಮಿಷನ್‌ನಿಂದ ಈ ಕುರಿತು ಯಾವುದೇ ಮಾಹಿತಿ ದೊರಕಿಲ್ಲ. ಈ ವಿಷಯದ ಕುರಿತು ಸ್ಥಿತಿಗತಿ ವರದಿ ಸಲ್ಲಿಸಲು ಆರು ವಾರಗಳ ಕಾಲಾವಕಾಶ ನೀಡಬೇಕು’ ಎಂದು ಪೀಠಕ್ಕೆ ಮನವಿ ಮಾಡಿದರು.

ADVERTISEMENT

ಈ ಮನವಿಯನ್ನು ಪುರಸ್ಕರಿಸಿದ ಪೀಠವು ಹಸ್ತಾಂತರ ಪ್ರಕ್ರಿಯೆಯ ಕುರಿತು ಆರು ವಾರದೊಳಗಾಗಿ ವರದಿ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಮುಂದಿನ ವರ್ಷದ ಜನವರಿ ಮೊದಲ ವಾರಕ್ಕೆ ಮುಂದೂಡಿತು.

ಇದೇ ವೇಳೆ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಮಲ್ಯ ಪರ ವಕೀಲ ಇ.ಸಿ.ಅಗರ್ವಾಲ ಅವರು ಸಲ್ಲಿಸಿದ್ದ ಮನವಿಯನ್ನು ಪೀಠ ತಿರಸ್ಕರಿಸಿತು. ಈ ಪ್ರಕರಣದಲ್ಲಿ ಮಲ್ಯ ಪರವಾಗಿ ಅಗರ್ವಾಲ ಅವರು ವಿಚಾರಣೆಗೆ ಹಾಜರಾಗಬೇಕು ಎಂದು ಪೀಠ ಸೂಚಿಸಿತು. ಸಾಲ ಮರುಪಾವತಿಸದೇ ಬ್ಯಾಂಕ್‌ಗಳಿಗೆ ₹9 ಸಾವಿರ ಕೋಟಿ ವಂಚನೆ ಎಸಗಿರುವ ಮಲ್ಯ, 2016 ಮಾರ್ಚ್‌ನಿಂದ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.