ADVERTISEMENT

ಹಿಂದೂ ಧಾರ್ಮಿಕ ಟ್ರಸ್ಟ್‌ನಲ್ಲಿ ಮುಸ್ಲಿಮರಿಗೂ ಅವಕಾಶ ನೀಡಲು ಸಿದ್ಧರಿದ್ದೀರಾ?: SC

ಪಿಟಿಐ
Published 16 ಏಪ್ರಿಲ್ 2025, 11:05 IST
Last Updated 16 ಏಪ್ರಿಲ್ 2025, 11:05 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಹಿಂದೂಗಳ ಧಾರ್ಮಿಕ ಟ್ರಸ್ಟ್‌ಗಳ ಭಾಗವಾಗಲು ಮುಸ್ಲಿಮರಿಗೂ ಅವಕಾಶ ಕಲ್ಪಿಸಲಾಗುವುದೇ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ಬುಧವಾರ ಪ್ರಶ್ನಿಸಿದೆ.

ವಕ್ಫ್‌ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್, ಕೆ.ವಿ. ವಿಶ್ವನಾಥನ್ ಅವರು ಇರುವ ತ್ರಿಸದಸ್ಯ ಪೀಠವು ಈ ಪ್ರಶ್ನೆ ಎತ್ತಿದೆ.

ADVERTISEMENT

ಪದನಿಮಿತ್ತ ಸದಸ್ಯರನ್ನು ಹೊರತುಪಡಿಸಿ, ವಕ್ಫ್‌ ಮಂಡಳಿ ಹಾಗೂ ಕೇಂದ್ರ ವಕ್ಫ್‌ ಪರಿಷತ್ತಿನ ಎಲ್ಲ ಸದಸ್ಯರು ಮುಸ್ಲಿಮರಾಗಿರಬೇಕು ಎಂದು ಪೀಠವು ಅನಿಸಿಕೆ ವ್ಯಕ್ತಪಡಿಸಿತು.

ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮುಸ್ಲಿಮರಲ್ಲಿ ಬಹುದೊಡ್ಡ ವರ್ಗವೊಂದಕ್ಕೆ ವಕ್ಫ್‌ ಕಾಯ್ದೆ ಬೇಕಾಗಿಲ್ಲ ಎಂದರು.

ಆಗ ಪೀಠವು, ‘ಈಗಿನಿಂದ ಮುಸ್ಲಿಮರನ್ನು ಹಿಂದೂ ಧಾರ್ಮಿಕ ದತ್ತಿ ಮಂಡಳಿಗಳ ಭಾಗವಾಗಲು ಅವಕಾಶ ನೀಡುವುದಾಗಿ ನೀವು ಹೇಳುತ್ತಿದ್ದೀರಾ? ಅದನ್ನು ಬಹಿರಂಗವಾಗಿ ತಿಳಿಸಿ’ ಎಂದು ಹೇಳಿತು.

ಶಾಸನಾತ್ಮಕ ಮಂಡಳಿಯೊಂದರಲ್ಲಿ ಮುಸ್ಲಿಮೇತರರು ಇರಬಾರದು ಎಂಬ ವಾದವನ್ನು ಒಪ್ಪಿಕೊಳ್ಳುವುದಾದರೆ, ಈಗಿನ ನ್ಯಾಯಪೀಠ ಕೂಡ ಈ ವಿಷಯವನ್ನು ಆಲಿಸಲು ಸಾಧ್ಯವಾಗುವುದಿಲ್ಲ ಎಂದು ಮೆಹ್ತಾ ವಾದಿಸಿದರು.

ಇದಕ್ಕೆ ಪೀಠವು, ‘ನಾವು ಇಲ್ಲಿ ಕುಳಿತಾಗ ನಮ್ಮ ಧರ್ಮವನ್ನು ಕಳಚಿರುತ್ತೇವೆ. ನಾವು ಸಂಪೂರ್ಣವಾಗಿ ಧರ್ಮನಿರಪೇಕ್ಷ ಆಗಿರುತ್ತೇವೆ. ನಮಗೆ ಎರಡೂ ಕಡೆಗಳು ಒಂದೇ. ಆದರೆ, ಧಾರ್ಮಿಕ ವ್ಯವಹಾರಗಳನ್ನು ನೋಡಿಕೊಳ್ಳುವ ಮಂಡಳಿ ಬಗ್ಗೆ ಆಲೋಚಿಸುವಾಗ, ಸಮಸ್ಯೆ ಉಂಟಾಗಬಹುದು’ ಎಂದು ವಿವರಿಸಿತು.

ಸಾರ್ವಜನಿಕ ಟ್ರಸ್ಟ್‌ ಒಂದನ್ನು ವಕ್ಫ್‌ ಎಂದು 100 ಅಥವಾ 200 ವರ್ಷಗಳ ಹಿಂದೆ ಘೋಷಿಸಿದ್ದಾಗ, ಅದನ್ನು ವಕ್ಫ್‌ ಮಂಡಳಿಯು ತಕ್ಷಣವೇ ಸ್ವಾಧೀನಕ್ಕೆ ತೆಗೆದುಕೊಂಡು, ಇನ್ನೊಂದು ಬಗೆಯಲ್ಲಿ ಘೋಷಣೆ ಮಾಡಲು ಅವಕಾಶ ಇಲ್ಲ ಎಂದು ಪೀಠವು ವಿವರಿಸಿತು.

ವಕ್ಫ್‌ ಕಾಯ್ದೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಒಂದು ಹೈಕೋರ್ಟ್‌ಗೆ ವಹಿಸಬಹುದು ಎಂದು ಸಿಜೆಐ ಹೇಳಿದರು.

‘ಎರಡೂ ಬದಿಯವರಲ್ಲಿ ಒಂದು ಅಂಶದ ಬಗ್ಗೆ ನಾವು ಕೇಳಬೇಕಿದೆ. ಮೊದಲನೆಯದು, ಅರ್ಜಿಗಳನ್ನು ನಾವು ಆಲಿಸಬೇಕೇ ಅಥವಾ ಅದನ್ನು ಹೈಕೋರ್ಟ್‌ಗೆ ವರ್ಗಾಯಿಸಬೇಕೇ? ಎರಡನೆಯದು, ನೀವು ನಿಜವಾಗಿಯೂ ಕೋರುತ್ತಿರುವುದು ಏನೆಂಬುದನ್ನು, ಮಂಡಿಸಲು ಬಯಸಿರುವ ವಾದ ಏನೆಂಬುದನ್ನು ನಿಖರವಾಗಿ ತಿಳಿಸಿ’ ಎಂದು ಸಿಜೆಐ ಹೇಳಿದರು.

ವಕ್ಫ್‌ ಕಾಯ್ದೆಯ ಪರಿಣಾಮಗಳು ದೇಶದಾದ್ಯಂತ ಇರುತ್ತವೆ. ಹೀಗಾಗಿ ಅರ್ಜಿಗಳನ್ನು ಹೈಕೋರ್ಟ್‌ಗೆ ವರ್ಗಾವಣೆ ಮಾಡಬಾರದು ಎಂದು ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಮನವಿ ಮಾಡಿದರು.

ಮುಸ್ಲಿಮರು ಮಾತ್ರವೇ ವಕ್ಫ್‌ ಘೋಷಣೆ ಮಾಡಬಹುದು ಎಂಬುದನ್ನು ತಾವು ಪ್ರಶ್ನಿಸುತ್ತಿರುವುದಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದರು. ‘ವ್ಯಕ್ತಿಯೊಬ್ಬ ಮುಸ್ಲಿಮನೇ, ಅಲ್ಲವೇ, ವಕ್ಫ್‌ ಘೋಷಣೆಗೆ ಆತ ಅರ್ಹನೇ ಎಂಬುದನ್ನು ಸರ್ಕಾರವು ಹೇಗೆ ತೀರ್ಮಾನಿಸಬಹುದು’ ಎಂದು ಸಿಬಲ್ ಪ್ರಶ್ನಿಸಿದರು.

‘ಐದು ವರ್ಷಗಳಿಂದ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿರುವವರು ಮಾತ್ರ ವಕ್ಫ್‌ ಘೋಷಣೆ ಮಾಡಬಹುದು ಎಂಬುದನ್ನು ಸರ್ಕಾರ ಹೇಗೆ ಹೇಳಬಹುದು’ ಎಂದೂ ಅವರು ಪ್ರಶ್ನಿಸಿದರು. ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ 72ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

ವಕ್ಫ್‌ ಕಾಯ್ದೆಯನ್ನು ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ಉಂಟಾಗಿದ್ದುದು ಮನಸ್ಸನ್ನು ಬಹಳವಾಗಿ ಕಲಕುವಂಥದ್ದು ಎಂದು ಪೀಠವು ವಿಚಾರಣೆ ಸಂದರ್ಭದಲ್ಲಿ ಹೇಳಿದೆ.

ಬಳಕೆಯ ಕಾರಣದಿಂದಾಗಿ ವಕ್ಫ್‌...

ಹಲವು ಸಂದರ್ಭಗಳಲ್ಲಿ ಆಸ್ತಿಯನ್ನು ವಕ್ಫ್‌ ಎಂದು ನೋಂದಾಯಿಸಲು ಅಗತ್ಯ ದಾಖಲೆಗಳು ಇರುವುದಿಲ್ಲ ಹೀಗಿರುವಾಗ ‘ಬಳಕೆಯ ಕಾರಣದಿಂದಾಗಿ ವಕ್ಫ್‌’ ಎಂಬ ಪರಿಕಲ್ಪನೆಯನ್ನು ನಿರಾಕರಿಸುವುದು ಹೇಗೆ ಎಂಬ ಪ್ರಶ್ನೆಯನ್ನು ಕೂಡ ನ್ಯಾಯಪೀಠವು ಕೇಂದ್ರದ ಮುಂದೆ ಇರಿಸಿದೆ. ‘ಬಳಕೆಯ ಕಾರಣದಿಂದಾಗಿ ವಕ್ಫ್‌’ ಅಂದರೆ ಆಸ್ತಿಯ ಮಾಲೀಕರು ಆ ಆಸ್ತಿಯನ್ನು ವಕ್ಫ್‌ ಉದ್ದೇಶಕ್ಕಾಗಿ ನೀಡಿದ್ದಕ್ಕೆ ಲಿಖಿತ ದಾಖಲೆ ಇಲ್ಲದಿದ್ದರೂ ಅದು ಬಹಳ ಕಾಲದಿಂದ ವಕ್ಫ್‌ ಉದ್ದೇಶಕ್ಕಾಗಿ ನಿರಂತರವಾಗಿ ಬಳಕೆಯಾಗುತ್ತ ಇದ್ದರೆ ಅದನ್ನು ವಕ್ಫ್‌ ಎಂದೇ ಪರಿಗಣಿಸುವುದು. ‘ಇಂತಹ ಆಸ್ತಿಗಳನ್ನು ನೀವು ಹೇಗೆ ನೋಂದಾಯಿಸುತ್ತೀರಿ? ಅವರ ಬಳಿ ಯಾವ ದಾಖಲೆಗಳು ಇರುತ್ತವೆ? ಕೆಲವೆಡೆ ದುರ್ಬಳಕೆಗಳು ನಡೆದಿವೆ ಎಂಬುದು ನಿಜ. ಆದರೆ ನೈಜ ಉದ್ದೇಶಕ್ಕೆ ಬಳಕೆ ಆಗುತ್ತಿರುವುದೂ ಇದೆ... ಬಳಕೆಯ ಕಾರಣದಿಂದಾಗಿನ ವಕ್ಫ್‌ಗೆ ಮಾನ್ಯತೆ ಇದೆ. ಇದನ್ನು ನೀವು ಇಲ್ಲವಾಗಿಸಿದರೆ ಸಮಸ್ಯೆ ಆಗುತ್ತದೆ’ ಎಂದು ಪೀಠವು ಹೇಳಿತು.

ಕೇಂದ್ರದ ಎದುರು ಪ್ರಸ್ತಾವ

ನವದೆಹಲಿ: ನ್ಯಾಯಾಲಯಗಳು ವಕ್ಫ್‌ ಎಂದು ಘೋಷಿಸಿರುವ ಆಸ್ತಿಗಳು ‘ಬಳಕೆಯ ಕಾರಣದಿಂದಾಗಿ ವಕ್ಫ್‌’ ಆಗಿರಲಿ ಅಥವಾ ‘ಕ್ರಯಪತ್ರದ ಮೂಲಕ ವಕ್ಫ್‌ ಆಗಿರಲಿ’ ಅವುಗಳನ್ನು ಡಿನೋಟಿಫೈ ಮಾಡಬಾರದು ಎಂಬ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್‌ ಕೇಂದ್ರದ ಮುಂದೆ ಇರಿಸಿದೆ. ಆಸ್ತಿಯೊಂದು ಸರ್ಕಾರಕ್ಕೆ ಸೇರಿದೆಯೇ ಎಂಬ ಬಗ್ಗೆ ಜಿಲ್ಲಾಧಿಕಾರಿಯು ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಆ ಆಸ್ತಿಯನ್ನು ವಕ್ಫ್‌ ಎಂದು ಪರಿಗಣಿಸಲಾಗದು ಎಂದು ಕಾಯ್ದೆಯಲ್ಲಿ ಇರುವ ಅಂಶವನ್ನು ಜಾರಿಗೆ ತರಬಾರದು ಎಂಬ ಆದೇಶವನ್ನು ತಾನು ಹೊರಡಿಸಬಹುದು ಎಂಬ ಸೂಚನೆಯನ್ನು ಕೂಡ ಪೀಠವು ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.