ADVERTISEMENT

ಅರ್ಜಿಗಳ ತುರ್ತು ವಿಚಾರಣೆ; ಪಟ್ಟಿಗೆ ಸೇರಿಸಲು ಹೊಸ ಪದ್ಧತಿ ಜಾರಿ

ಪಿಟಿಐ
Published 29 ಜೂನ್ 2023, 11:42 IST
Last Updated 29 ಜೂನ್ 2023, 11:42 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ತುರ್ತು ವಿಚಾರಣೆ ಅಗತ್ಯವಿರುವ ಪ್ರಕರಣಗಳು ಸ್ವಯಂಚಾಲಿತವಾಗಿ ಸಂಬಂಧಪಟ್ಟ ನ್ಯಾಯಪೀಠಗಳಲ್ಲಿ ವಿಚಾರಣಾ ಪಟ್ಟಿಗೆ ಸೇರುವಂತೆ ಮಾಡುವ ಹೊಸ ಪದ್ಧತಿಯನ್ನು ಸುಪ್ರೀಂಕೋರ್ಟ್‌ ಜಾರಿಗೆ ತಂದಿದೆ.

ತುರ್ತು ವಿಚಾರಣೆ ಅಗತ್ಯವಿರುವಂತಹ ಪ್ರಕರಣಗಳನ್ನು ಸುಪ್ರೀಂಕೋರ್ಟ್‌ನ ರಜಿಸ್ಟ್ರಿಯು ಶನಿವಾರ, ಸೋಮವಾರ ಹಾಗೂ ಮಂಗಳವಾರ ಪರಿಶೀಲಿಸುತ್ತದೆ. ಈ ಪ್ರಕರಣಗಳು ವಿಚಾರಣೆಗಾಗಿ ಮುಂದಿನ ಸೋಮವಾರ ಸಂಬಂಧಪಟ್ಟ ನ್ಯಾಯಪೀಠ ಮುಂದೆ ಬರುತ್ತವೆ. ಅಲ್ಲದೆ, ಇಂಥ ಪ್ರಕರಣಗಳ ಕುರಿತು ವಕೀಲರು ಮುಖ್ಯನ್ಯಾಯಮೂರ್ತಿಗಳ ಬಳಿ ಪ್ರಸ್ತಾಪಿಸುವ ಅಗತ್ಯವೂ ಇರುವುದಿಲ್ಲ ಸುಪ್ರೀಂಕೋರ್ಟ್‌ನ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

‘ಜುಲೈ 3ರಿಂದ ಈ ಪದ್ಧತಿ ಜಾರಿಗೆ ಬರಲಿದೆ. ಈ ಬಗ್ಗೆ ವಕೀಲರ ಸಂಘ ಹಾಗೂ ಸಂಬಂಧಪಟ್ಟವರಿಗೆ ಜೂನ್‌ 28ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ’ ಎಂದೂ ವಿವರಿಸಲಾಗಿದೆ.

ADVERTISEMENT

‘ಇನ್ನು, ಬುಧವಾರ, ಗುರುವಾರ ಹಾಗೂ ಶುಕ್ರವಾರ ಪರಿಶೀಲನೆಗೆ ಒಳಗಾಗುವ ಸಾಮಾನ್ಯ ಪ್ರಕರಣಗಳು ನಂತರದ ಶುಕ್ರವಾರ ವಿಚಾರಣಾಪಟ್ಟಿಗೆ ಸ್ವಯಂ ಚಾಲಿತವಾಗಿ ಸೇರ್ಪಡೆಗೊಳ್ಳಲಿವೆ’ ಎಂದೂ ಸುತ್ತೋಲೆ ತಿಳಿಸಿದೆ.

‘ಒಂದು ವೇಳೆ, ಯಾವುದಾದರೂ ಅರ್ಜಿಯೊಂದರ ವಿಚಾರಣೆ ತುರ್ತಾಗಿ ನಡೆಯಬೇಕು ಎಂದಾದರೆ, ಆ ಬಗ್ಗೆ ವಕೀಲರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಮುಂದಿನ ವಿಚಾರಣೆ ದಿನದ ಮುನ್ನಾ ದಿನ ಮಧ್ಯಾಹ್ನ 3 ಗಂಟೆ ಒಳಗಾಗಿ ಈ ಅರ್ಜಿಯನ್ನು ಸಲ್ಲಿಸಬೇಕು’.

‘ಅದೇ ದಿನವೇ ತುರ್ತು ವಿಚಾರಣೆ ನಡೆಸಬೇಕು ಎಂಬ ಬೇಡಿಕೆ ಇದ್ದಲ್ಲಿ, ನಿಗದಿತ ಅರ್ಜಿಯನ್ನು ಆಯಾ ದಿನ ಬೆಳಿಗ್ಗೆ 10.30ರ ಒಳಗೆ ಸಲ್ಲಿಸಬೇಕು. ತುರ್ತು ವಿಚಾರಣೆಗೆ ಕಾರಣ ತಿಳಿಸುವ ಮನವಿಪತ್ರವನ್ನೂ ಲಗತ್ತಿಸಿರಬೇಕು’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.