ನವದೆಹಲಿ: ಮಾಟಮಂತ್ರ, ಮೂಢನಂಬಿಕೆ ಹಾಗೂ ಕಾಣಿಕೆ ಮತ್ತು ಹಣದ ಆಮಿಷವೊಡ್ಡುವ ಮೂಲಕ ಧಾರ್ಮಿಕ ಮತಾಂತರ ಮಾಡುವುದನ್ನು ನಿಯಂತ್ರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
‘ಇದು ಪ್ರಚಾರದ ಹಿತಾಸಕ್ತಿ ಅರ್ಜಿಯಾಗಿದೆ. 18 ವರ್ಷ ಮೇಲ್ಪಟ್ಟವರು ತಮ್ಮ ಧರ್ಮವನ್ನು ಆಯ್ಕೆ ಮಾಡಿಕೊಳ್ಳಲು ಯಾಕೆ ಅವಕಾಶ ನೀಡಬಾರದು. ಈ ಬಗ್ಗೆ ಯಾವುದೇ ಕಾರಣಗಳಿಲ್ಲ’ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್, ಬಿ.ಆರ್. ಗವಾಯಿ ಮತ್ತು ಹೃಷಿಕೇಶ ರಾಯ್ ಅವರನ್ನೊಳಗೊಂಡ ಪೀಠವು, ಈ ಬಗ್ಗೆ ವಾದ ಮಂಡಿಸಿದರೆ ಅಪಾರ ದಂಡ ವಿಧಿಸಲಾಗುವುದು ಎಂದು ಅರ್ಜಿದಾರರಾದ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರಿಗೆ ಎಚ್ಚರಿಕೆ ನೀಡಿತು.
ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅರ್ಜಿಯನ್ನು ವಾಪಸ್ ಪಡೆಯಲಾಯಿತು.
‘ಪ್ರತಿ ವಾರ ದೇಶದಾದ್ಯಂತ ಹಲವಾರು ಮತಾಂತರ ಪ್ರಕರಣಗಳು ವರದಿಯಾಗುತ್ತಿವೆ. ಮತಾಂತರಗೊಳ್ಳುವಂತೆ ಬೆದರಿಕೆ ಹಾಗೂ ಹಣದ ಆಮಿಷವೊಡ್ಡಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ’ ಎಂದು ಅರ್ಜಿದಾರರು ದೂರಿದ್ದರು.
‘ಸರ್ಕಾರ ಮೌನವಾಗಿರುವುದರಿಂದ ಹಲವು ಸರ್ಕಾರೇತರ ಸಂಸ್ಥೆಗಳು ಬಡಜನರ ಮತಾಂತರದಲ್ಲಿ ತೊಡಗಿವೆ. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರನ್ನು ಇನ್ನೊಂದು ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.