ADVERTISEMENT

ವಿಚಾರಣೆಗೆ ಗೈರಾದ ಅಧಿಕಾರಿಗಳ ನಡೆಗೆ ಕೋರ್ಟ್‌ ಕೆಂಡ

ಪಿಟಿಐ
Published 2 ಏಪ್ರಿಲ್ 2024, 15:48 IST
Last Updated 2 ಏಪ್ರಿಲ್ 2024, 15:48 IST
   

ನವದೆಹಲಿ: ಮರಳು ಗಣಿಗಾರಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ವಿಚಾರಣೆಗೆ ಹಾಜರಾಗದ ತಮಿಳುನಾಡಿನ ಐವರು ಜಿಲ್ಲಾಧಿಕಾರಿಗಳ ನಡೆಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಅಸಮ್ಮತಿ ಸೂಚಿಸಿದೆ.

ಅಧಿಕಾರಿಗಳು ಇ.ಡಿ. ಎದುರು ಏಪ್ರಿಲ್‌ 25ರಂದು ಹಾಜರಾಗಬೇಕು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅದು ತಾಕೀತು ಮಾಡಿದೆ. ಕೋರ್ಟ್‌ ಸೂಚನೆ ಇದ್ದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

ಇದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರು ಇದ್ದ ವಿಭಾಗೀಯ ಪೀಠವು, ಅಧಿಕಾರಿಗಳು ನಿರ್ಲಕ್ಷ್ಯದಿಂದ ನಡೆದುಕೊಂಡಿದ್ದಾರೆ ಎಂದು ಹೇಳಿದೆ. ಅವರಿಗೆ ನ್ಯಾಯಾಲಯ, ಕಾನೂನು ಮತ್ತು ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂಬುದನ್ನು ಇದು ತೋರಿಸುತ್ತದೆ ಎಂದು ಕೂಡ ಪೀಠ ಹೇಳಿದೆ.

ADVERTISEMENT

‘ನಮ್ಮ ಅಭಿಪ್ರಾಯದಲ್ಲಿ, ಇಂತಹ ನಿರ್ಲಕ್ಷ್ಯದ ಧೋರಣೆಯು ಅವರನ್ನು ಕಷ್ಟಕ್ಕೆ ಸಿಲುಕಿಸುತ್ತದೆ. ಇ.ಡಿ. ಜಾರಿಗೊಳಿಸಿರುವ ಸಮನ್ಸ್‌ಗೆ ಪ್ರತಿಯಾಗಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಕೋರ್ಟ್‌ ಆದೇಶ ನೀಡಿದ್ದಾಗ ಅವರು ಆ ಆದೇಶವನ್ನು ಪಾಲಿಸಬೇಕಿತ್ತು, ವಿಚಾರಣೆಗೆ ಹಾಜರಾಗಬೇಕಿತ್ತು’ ಎಂದು ಅಭಿಪ್ರಾಯಪಟ್ಟಿದೆ.

ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆಯಲ್ಲಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಯ ಅನುಷ್ಠಾನದಲ್ಲಿ ತೊಡಗಿಸಿಕೊಂಡಿದ್ದರು ಎಂದು ತಮಿಳುನಾಡು ಸರ್ಕಾರದ ಪರವಾಗಿ ವಾದಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಮಿತ್ ಆನಂದ್ ತಿವಾರಿ ತಿಳಿಸಿದರು.

ಅಧಿಕಾರಿಗಳು ಇ.ಡಿ ಮುಂದೆ ಹಾಜರಾಗಿ ಕಾರಣಗಳನ್ನು ವಿವರಿಸಬೇಕಿತ್ತು ಎಂದು ಪೀಠವು ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.