ಸುಪ್ರೀಂ ಕೋರ್ಟ್
ನವದೆಹಲಿ: ಚುನಾವಣೆಗೆ ಮೊದಲು ‘ಉಚಿತ ಕೊಡುಗೆಗಳನ್ನು’ ಘೋಷಿಸುವ ರಾಜಕೀಯ ಪಕ್ಷಗಳ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ. ದೇಶದ ಅಭಿವೃದ್ಧಿಗಾಗಿ ಜನರನ್ನು ಮುಖ್ಯವಾಹಿನಿಗೆ ತರುವ ಬದಲು, ‘ಪರಾವಲಂಬಿ ವರ್ಗವೊಂದನ್ನು ಸೃಷ್ಟಿಸುವ ಕೆಲಸ ಆಗುತ್ತಿದೆಯಲ್ಲವೇ’ ಎಂದು ಕೋರ್ಟ್ ಪ್ರಶ್ನಿಸಿದೆ.
ಜನರನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಅವರು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಮಾಡುವುದು ಹೆಚ್ಚು ಉತ್ತಮ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
‘ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ಅವರು ಸಮಾಜದ ಮುಖ್ಯವಾಹಿನಿಯ ಭಾಗವಾಗುವಂತೆ ಮಾಡುವ ಬದಲು ನಾವು ಪರಾವಲಂಬಿ ವರ್ಗವೊಂದನ್ನು ಸೃಷ್ಟಿಸುತ್ತಿಲ್ಲವೇ’ ಎಂದು ಪೀಠ ಪ್ರಶ್ನಿಸಿದೆ.
‘ದುರದೃಷ್ಟದ ಸಂಗತಿಯೆಂದರೆ, ಚುನಾವಣೆಯ ಮಾತುಗಳು ನಡೆಯುತ್ತಿರುವಾಗ ಘೋಷಣೆಯಾಗುವ ‘ಲಾಡ್ಕಿ ಬಹೀಣ್’ನಂತಹ ಉಚಿತ ಕೊಡುಗೆಗಳ ಕಾರಣದಿಂದಾಗಿ ಜನರು ಕೆಲಸ ಮಾಡಲು ಮನಸ್ಸು ಮಾಡುತ್ತಿಲ್ಲ’ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.
ನಗರ ಪ್ರದೇಶಗಳಲ್ಲಿ ಮನೆ ಇಲ್ಲದವರಿಗೆ ಸೂರಿನ ಹಕ್ಕು ಕುರಿತ ಅರ್ಜಿಯ ವಿಚಾರಣೆ ನಡೆಸುವ ಸಂದರ್ಭದಲ್ಲಿ ಪೀಠವು ಈ ಮಾತು ಹೇಳಿದೆ.
ಅರ್ಜಿದಾರರಲ್ಲಿ ಒಬ್ಬರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಕೆಲಸ ಇದೆ ಎಂದಾದರೆ ಕೆಲಸ ಮಾಡಲು ಮನಸ್ಸು ಇಲ್ಲದವರ ಸಂಖ್ಯೆ ಈ ದೇಶದಲ್ಲಿ ಬಹಳ ಕಡಿಮೆ ಎಂದರು.
‘ನಿಮಗೆ ಒಂದು ಬದಿಯ ಮಾಹಿತಿ ಮಾತ್ರ ಇದ್ದಿರಬೇಕು. ನಾನು ಕೃಷಿ ಕುಟುಂಬದಿಂದ ಬಂದವನು. ಮಹಾರಾಷ್ಟ್ರದಲ್ಲಿ ಚುನಾವಣೆಗೆ ತುಸು ಮೊದಲು ಘೋಷಿಸಿದ ಉಚಿತ ಕೊಡುಗೆಗಳ ಕಾರಣದಿಂದಾಗಿ ಕೃಷಿಕರಿಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ’ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು. ಆದರೆ ಈ ವಿಚಾರವಾಗಿ ಚರ್ಚೆಗೆ ತಾನು ಇಳಿಯುವುದಿಲ್ಲ ಎಂದು ಪೀಠ ಹೇಳಿತು.
ಉಚಿತ ಕೊಡುಗೆ: ವಿಚಾರಣೆಗೆ ಹೈಕೋರ್ಟ್ ನಕಾರ
ಉಚಿತ ಕೊಡುಗೆಗಳು ಹಾಗೂ ನಗದು ಕೊಡುವ ಯೋಜನೆಗಳ ಭರವಸೆಯನ್ನು ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಇದೇ ವಿಷಯಕ್ಕೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ವಿಚಾರಣೆಗೆ ಕೈಗೆತ್ತಿಕೊಂಡಿದೆ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಹೈಕೋರ್ಟ್ ಹೇಳಿದೆ. ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್.ಎನ್. ಧಿಂಗ್ರಾ ಈ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯಲ್ಲಿ ಬಹಳ ಮುಖ್ಯವಾದ ಸಂಗತಿಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದೆ. ಈ ಅರ್ಜಿಯನ್ನು ದೆಹಲಿ ಚುನಾವಣೆಗೂ ಮೊದಲು ಸಲ್ಲಿಸಲಾಗಿತ್ತು. ಆದರೆ ಅದು ಈಗ ವಿಚಾರಣೆಗೆ ಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.