ADVERTISEMENT

ಶುಲ್ಕ ಕಟ್ಟಲಾಗದ ದಲಿತ ವಿದ್ಯಾರ್ಥಿಗೆ ಐಐಟಿ ಪ್ರವೇಶ ನೀಡಲು ‘ಸುಪ್ರೀಂ’ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 1:28 IST
Last Updated 23 ನವೆಂಬರ್ 2021, 1:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಆದರೆ, ತಾಂತ್ರಿಕ ಕಾರಣಗಳಿಂದಾಗಿ ನಿಗದಿತ ಸಮಯಕ್ಕೆ ಶುಲ್ಕ ಕಟ್ಟಲಾಗದ ದಲಿತ ವಿದ್ಯಾರ್ಥಿಯೊಬ್ಬರಿಗೆ ಪ್ರವೇಶ ಕಲ್ಪಿಸುವಂತೆ, ಐಐಟಿ–ಬಾಂಬೆಗೆ ಸುಪ್ರೀಂ ಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.

‘ಐಐಟಿ–ಬಾಂಬೆಯಲ್ಲಿ ಸಿಕ್ಕಿರುವ ಅತ್ಯಮೂಲ್ಯವಾದ ಪ್ರವೇಶ ಕೈತಪ್ಪುವ ಸ್ಥಿತಿಯಲ್ಲಿ ಇರುವ ದಲಿತ ವಿದ್ಯಾರ್ಥಿಯೊಬ್ಬರು ನ್ಯಾಯಾಲಯದ ಮುಂದಿದ್ದಾರೆ. ಪ್ರವೇಶ ಅವಕಾಶ ಸಿಕ್ಕಿದ್ದರೂ ಶುಲ್ಕ ಪಾವತಿಸುವಲ್ಲಿ ಆದ ತಾಂತ್ರಿಕ ಕಾರಣಗಳಿಂದಾಗಿಯೇ ಅವರಿಗೆ ಆ ಅವಕಾಶ ಕೈತಪ್ಪುತ್ತದೆ ಎಂದಾದರೆ ಅದು ನ್ಯಾಯದ ದೊಡ್ಡ ವಿಡಂಬನೆಯಾಗುತ್ತದೆ’ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಹಾಗೂ ಎ.ಎಸ್‌. ಬೋಪಣ್ಣ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿತು.

ವಿದ್ಯಾರ್ಥಿಯ ಪರಿಸ್ಥಿತಿಯನ್ನು ಪರಿಗಣಿಸಿ ಐಐಟಿ–ಬಾಂಬೆಯಲ್ಲಿ ಪ್ರವೇಶ ಕಲ್ಪಿಸುವಂತೆ ಜಂಟಿ ಸೀಟು ಹಂಚಿಕೆ ಪ್ರಾಧಿಕಾರದ (ಜೆಒಎಸ್‌ಎಎ) ಪರವಾಗಿ ಹಾಜರಿದ್ದ ವಕೀಲರಿಗೆ ಸೂಚಿಸಿತು.

ADVERTISEMENT

‘ವಿದ್ಯಾರ್ಥಿಯ ಬಳಿಯಲ್ಲಿ ಹಣವಿರಲಿಲ್ಲ. ಆತನ ಸಹೋದರಿ ಹಣವನ್ನು ವರ್ಗಾಯಿಸಬೇಕಿತ್ತು. ಆದರೆ, ಆ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಆಗಿದೆ. ವಿದ್ಯಾರ್ಥಿಯು ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರದೇ ನಿರ್ಲಕ್ಷ್ಯ ಎಂದಾಗಿದ್ದಾರೆ, ನಾವು ನಿಮ್ಮನ್ನು ಕೇಳುತ್ತಿರಲಿಲ್ಲ’ ಎಂದ ನ್ಯಾಯಪೀಠವು, ಎಲ್ಲರ ಬಳಿಯೂ ಹಲವಾರು ಕ್ರೆಡಿಟ್‌ ಕಾರ್ಡ್‌ಗಳು ಇರುತ್ತವೆ ಎಂದು ನಿರೀಕ್ಷಿಸಲಾಗದು ಎಂದು ಹೇಳಿತು.

ಈಗಾಗಲೇ ಎಲ್ಲ ಸೀಟುಗಳೂ ಭರ್ತಿಯಾಗಿವೆ ಎಂದು ಜೆಒಎಸ್‌ಎಎ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.

ಐಐಟಿ– ಬಾಂಬೆಯಲ್ಲಿ, ಬಿ–ಟೆಕ್‌ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಈ ವಿದ್ಯಾರ್ಥಿಗೆ ಅ.27ರಂದು ಸೀಟು ಹಂಚಿಕೆಯಾಗಿತ್ತು.

ಪೂರ್ತಿಯಾಗಿ ಪ್ರವೇಶ ಶುಲ್ಕ ಭರಿಸಲು ಹಣದ ಕೊರತೆ ಆಗಿತ್ತು. ಸಹೋದರಿ ಅ.30ರಂದು ಹಣ ವರ್ಗಾಯಿಸಿದ ನಂತರ, ಅವರು ಮತ್ತೆ ಪ್ರವೇಶ ಶುಲ್ಕ ಕಟ್ಟಲು ಮುಂದಾದರು. ಆದರೆ, ಹಲವು ಪ್ರಯತ್ನಗಳ ಬಳಿಕವೂ ಅದು ಸಾಧ್ಯವಾಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.