ADVERTISEMENT

ಕೇರಳ: 11ನೇ ತರಗತಿಗೆ ಭೌತಿಕ ಪರೀಕ್ಷೆ ನಡೆಸದಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ಪಿಟಿಐ
Published 17 ಸೆಪ್ಟೆಂಬರ್ 2021, 12:52 IST
Last Updated 17 ಸೆಪ್ಟೆಂಬರ್ 2021, 12:52 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: 11ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ಪರೀಕ್ಷೆ ನಡೆಸುವ ಕೇರಳ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸು‍ಪ್ರೀಂಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ ಖಾನ್‌ವಿಲ್ಕರ್‌ ಮತ್ತು ಸಿ.ಟಿ. ರವಿಕುಮಾರ್‌ ಅವರ ಪೀಠವು, ‘ಕೇರಳ ಸರ್ಕಾರವು ಭೌತಿಕ ಪರೀಕ್ಷೆ ನಡೆಸುವುದರ ಕುರಿತಾಗಿ ವಿಸ್ತೃತ ಅಫಿಡವಿಟ್ ಸಲ್ಲಿಸಿದ್ದಾರೆ. ಇದರಲ್ಲಿ ‍ಪರೀಕ್ಷೆ ವೇಳೆ ಅನುಸರಿಸುವ ಕೋವಿಡ್‌ ಮಾರ್ಗಸೂಚಿ ಬಗ್ಗೆ ಹೇಳಲಾಗಿದೆ. ಅಧಿಕಾರಿಗಳಿಗೆ ಅವರ ಕರ್ತವ್ಯದ ಬಗ್ಗೆ ಅರಿವಿದೆ’ ಎಂದು ಹೇಳಿದೆ.

‘ಭೌತಿಕ ಪರೀಕ್ಷೆ ನಡೆಸುವುದರ ಹಿಂದಿನ ಕಾರಣದ ಬಗ್ಗೆ ಸರ್ಕಾರ ನೀಡಿರುವ ವಿವರಣೆಯನ್ನು ನಾವು ಒಪ್ಪಿಕೊಂಡಿದ್ದೇವೆ. ಪರೀಕ್ಷೆ ವೇಳೆ ಅಧಿಕಾರಿಗಳು ಎಲ್ಲಾ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ. ಹಾಗಾಗಿ ಈ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ’ ಎಂದು ನ್ಯಾಯಾಲಯ ತಿಳಿಸಿದೆ.

ADVERTISEMENT

‘ಸೆಪ್ಟೆಂಬರ್‌ನಲ್ಲಿ ಮೂರನೇ ಅಲೆಯ ಆಗಮಿಸಬಹುದು ಎಂದು ಅಂದಾಜಿಸಲಾಗಿತ್ತು. ಹಾಗಾಗಿ ಈ ಹಿಂದೆ ನ್ಯಾಯಾಲಯವು ಸರ್ಕಾರದ ನಿರ್ಧಾರದಲ್ಲಿ ಮಧ್ಯಪ‍್ರವೇಶಿಸಿತ್ತು. ಆದರೆ, ಈಗ ಮೂರನೇ ಅಲೆ ಅಷ್ಟೊಂದು ಹತ್ತಿರದಲ್ಲಿ ಇಲ್ಲ’ ಎಂದು ಪೀಠ ಹೇಳಿದೆ.

‘ಆನ್‌ಲೈನ್‌ ಪ‍ರೀಕ್ಷೆಯಿಂದಹಲವು ಮಕ್ಕಳಿಗೆ ತೊಂದರೆ ಆಗಬಹುದು. ಇಂಟರ್‌ನೆಟ್‌, ಲ್ಯಾಪ್‌ಟಾಪ್‌, ಮೊಬೈಲ್‌ ಫೋನ್‌ ಇಲ್ಲದ ಮಕ್ಕಳಿಗೆ ಪರೀಕ್ಷೆ ಎದುರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅನೇಕ ಮಕ್ಕಳಿಗೆ ಅನ್ಯಾಯವಾಗಬಹುದು’ ಎಂದು ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.