ADVERTISEMENT

'ಆರ್ಥಿಕ ಅಪರಾಧಿ' ಎಂದು ಘೋಷಿಸುವುದನ್ನು ಪ್ರಶ್ನಿಸಿದ್ದ ಉದ್ಯಮಿ ಮಲ್ಯ ಅರ್ಜಿ ವಜಾ

ಪಿಟಿಐ
Published 3 ಮಾರ್ಚ್ 2023, 11:04 IST
Last Updated 3 ಮಾರ್ಚ್ 2023, 11:04 IST
ಉದ್ಯಮಿ ವಿಜಯ್‌ ಮಲ್ಯ
ಉದ್ಯಮಿ ವಿಜಯ್‌ ಮಲ್ಯ   

ನವದೆಹಲಿ: ಪಲಾಯನಗೊಂಡಿರುವ ಆರ್ಥಿಕ ಅಪರಾಧಿ ಎಂದು ತಮ್ಮನ್ನು ಘೋಷಿಸುವುದು ಹಾಗೂ ತಮ್ಮ ಆಸ್ತಿಯ ಜಪ್ತಿಗೆ ಸಂಬಂಧಿಸಿದಂತೆ ಮುಂಬೈ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಪ್ರಶ್ನಿಸಿ ಉದ್ಯಮಿ ವಿಜಯ್‌ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

ಈ ಸಂಬಂಧ ವಾದ ಮಂಡನೆಗೆ ಸಂಬಂಧಿಸಿ ತಮ್ಮ ಅರ್ಜಿದಾರರಿಂದ ಯಾವುದೇ ಸೂಚನೆ ಇಲ್ಲ ಎಂದು ಮಲ್ಯ ಪರ ವಕೀಲರು ಮಾಹಿತಿ ನೀಡಿದ ಹಿಂದೆಯೇ ನ್ಯಾಯಮೂರ್ತಿಗಳಾದ ಅಭಯ್‌ ಎಸ್.ಒಕಾ ಮತ್ತು ರಾಜೇಶ್‌ ಬಿಂದಾಲ್ ಅವರಿದ್ದ ಪೀಠವು ಈ ಅರ್ಜಿಯನ್ನು ವಜಾ ಮಾಡಿತು.

ಮಲ್ಯ ಅವರ ಅರ್ಜಿ ಆಧರಿಸಿ ಸುಪ್ರೀಂ ಕೋರ್ಟ್ 2018ರ ಡಿ. 7ರಂದು ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿತ್ತು. ಮಲ್ಯ ಅವರನ್ನು ಪಲಾಯನಗೊಂಡಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಲು ಕೋರಿ ಇ.ಡಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯ ವಿಶೇಷ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ADVERTISEMENT

ಮಲ್ಯ ಅವರನ್ನು ಪಲಾಯನಗೊಂಡಿರುವ ಆರ್ಥಿಕ ಅಪರಾಧಿ ಎಂದು 2019ರ ಜ. 5 ರಂದು ಮುಂಬೈ ಕೋರ್ಟ್‌ ಘೋಷಿಸಿತ್ತು. ಕಾಯ್ದೆ ಅನುಸಾರ ಕೋರ್ಟ್ ಒಮ್ಮೆ ಹೀಗೆ ವ್ಯಕ್ತಿಯನ್ನು ಘೋಷಿಸಿದಲ್ಲಿ, ಅವರ ಆಸ್ತಿಯನ್ನು ಜಪ್ತಿ ಮಾಡುವ ಅಧಿಕಾರವು ತನಿಖಾ ಸಂಸ್ಥೆಗೆ ದತ್ತವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.