ADVERTISEMENT

ಉಚಿತ ಕೊಡುಗೆ ಪರಿಣಾಮದ ಅಧ್ಯಯನಕ್ಕೆ ಸಮಿತಿ ಏಕೆ ರಚಿಸಬಾರದು? ಸುಪ್ರೀಂ ಪ್ರಶ್ನೆ

ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 14:26 IST
Last Updated 24 ಆಗಸ್ಟ್ 2022, 14:26 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ‘ಚುನಾವಣಾ ಪೂರ್ವದಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ‘ಉಚಿತ ಕೊಡುಗೆ’ಗಳನ್ನು ಪ್ರಕಟಿಸುತ್ತಿದ್ದು, ಇದರಿಂದ ಆಗಬಹುದಾದ ಪರಿಣಾಮದ ಕುರಿತ ಅಧ್ಯಯನಕ್ಕೆ ಸಮಿತಿಯೊಂದನ್ನು ಏಕೆ ರಚಿಸಬಾರದು. ಈ ಸಂಬಂಧ ಸರ್ವಪಕ್ಷಗಳ ಸಭೆ ನಡೆಸಲು ಏಕೆ ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಕೇಂದ್ರ ಸರ್ಕಾರವನ್ನು ಕೇಳಿದೆ.

ಉಚಿತ ಕೊಡುಗೆಗಳನ್ನು ಘೋಷಿಸುವುದರಿಂದ ಆರ್ಥಿಕತೆ ಮತ್ತು ಪಾರದರ್ಶಕ ಚುನಾವಣೆ ಪ್ರಕ್ರಿಯೆ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ಹಾಗೂ ಬಿಜೆಪಿ ಮುಖಂಡ ಅಶ್ವಿನಿಕುಮಾರ್‌ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಸಿ.ಟಿ.ರವಿಕುಮಾರ್‌ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಬುಧವಾರ ಇದರ ವಿಚಾರಣೆ ನಡೆಸಿತು.

ADVERTISEMENT

‘ಉಚಿತ ಕೊಡುಗೆಗಳನ್ನು ಘೋಷಿಸುವುದು ಹಾಗೂ ಅದನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರ್ಪಡೆಮಾಡುವುದು ತಮ್ಮ ಮೂಲಭೂತ ಹಕ್ಕು ಎಂದು ಪಕ್ಷಗಳು ಪ್ರತಿಪಾದಿಸುತ್ತವೆ’ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪೀಠಕ್ಕೆ ಹೇಳಿದರು.

‘ಸಂವಿಧಾನದ ವಿಧಿ 19ರ ಪ್ರಕಾರ ಮುಕ್ತವಾಗಿ ಮಾತನಾಡುವ, ಚುನಾವಣಾ ಭಾಷಣಗಳನ್ನು ಮಾಡುವ ಹಾಗೂ ಭರವಸೆಗಳನ್ನು ನೀಡುವ ಹಕ್ಕು ಇದೆ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ವಾದಿಸುತ್ತಿದೆ. ‘ಉಚಿತ ಕೊಡುಗೆ’ ಕುರಿತ ಎಲ್ಲಾ ಮಾಹಿತಿ ಹಾಗೂ ದತ್ತಾಂಶಗಳನ್ನು ಕೇಂದ್ರವು ಶೀಘ್ರವೇ ಪೀಠದ ಮುಂದೆ ಇಡಲಿದೆ’ ಎಂದೂ ಮೆಹ್ತಾ ತಿಳಿಸಿದರು.

ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್‌.ಎಂ.ಲೋಧಾ ಹಾಗೂ ಮಾಜಿ ಸಿಎಜಿ ವಿನೋದ್‌ ರಾಯ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ ಅರ್ಜಿದಾರರ ಪರ ವಕೀಲ ವಿಕಾಸ್‌ ಸಿಂಗ್‌ ಅವರು ಪೀಠಕ್ಕೆ ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಯವರು ‘ಈಗಾಗಲೇ ನಿವೃತ್ತರಾಗಿರುವ ಹಾಗೂ ನಿವೃತ್ತಿಯ ಅಂಚಿನಲ್ಲಿರುವವರಿಗೆ ಈ ದೇಶದಲ್ಲಿ ಬೆಲೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.