ADVERTISEMENT

ಗೋಕರ್ಣ ದೇಗುಲ ಮುಜರಾಯಿ ಸುಪರ್ದಿಗೆ:ಉಸ್ತುವಾರಿ ಸಮಿತಿಗೆ ಸದ್ಯದಲ್ಲೇ ಸದಸ್ಯರ ನೇಮಕ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2018, 19:51 IST
Last Updated 19 ಸೆಪ್ಟೆಂಬರ್ 2018, 19:51 IST
ಗೋಕರ್ಣ ಮಹಾಬಲೇಶ್ವರ ದೇವಸ್ಥಾನ
ಗೋಕರ್ಣ ಮಹಾಬಲೇಶ್ವರ ದೇವಸ್ಥಾನ    

ಗೋಕರ್ಣ (ಉತ್ತರ ಕನ್ನಡ):ಇಲ್ಲಿನ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ಮುಜರಾಯಿ ಇಲಾಖೆ ಬುಧವಾರ ತನ್ನ ಸುಪರ್ದಿಗೆ ತೆಗೆದುಕೊಂಡಿತು. ಇಲಾಖೆ ಪರವಾಗಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ದೇವಸ್ಥಾನದ ಉಸ್ತುವಾರಿಯನ್ನು ವಹಿಸಿಕೊಂಡರು.

ದೇವಸ್ಥಾನದ ಚರಾಸ್ತಿ, ಸ್ಥಿರಾಸ್ತಿ ಹಾಗೂ ಬೆಲೆಬಾಳುವ ವಸ್ತುಗಳನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಯ ವಶಕ್ಕೆ ಒಪ್ಪಿಸಲಾಯಿತು. ‘ದೇವಸ್ಥಾನವು ರಾಮಚಂದ್ರಾಪುರ ಮಠದ ಆಡಳಿತಕ್ಕೆ ಒಳಪಟ್ಟಿದೆ’ ಎಂಬ ಫಲಕಕ್ಕೆ ಬಿಳಿಯ ಬಣ್ಣ ಬಳಿದು ಅಳಿಸಿ ಹಾಕಲಾಯಿತು. ದೇವಸ್ಥಾನದಲ್ಲಿ ಇಟ್ಟಿದ್ದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಭಾವಚಿತ್ರವಿರುವ ಫಲಕಗಳನ್ನು ತೆರವುಗೊಳಿಸಲಾಯಿತು.

ಮಠದಿಂದ ನೇಮಕವಾಗಿದ್ದ ಕೆಲಸಗಾರರಿಗೆ ದೇವಸ್ಥಾನದಿಂದ ಹೊರ ಹೋಗಲು ನಾಲ್ಕು ದಿನಗಳ ಸಮಯ ನೀಡಲಾಗಿದೆ. ‘ದೇವಸ್ಥಾನ ಉಸ್ತುವಾರಿ ಸಮಿತಿಗೆ ಸದ್ಯದಲ್ಲೇ ಸದಸ್ಯರನ್ನು ನೇಮಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ADVERTISEMENT

2008ರ ಆಗಸ್ಟ್‌ 14ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಈ ದೇವಸ್ಥಾನದ ಆಡಳಿತವನ್ನು ವಹಿಸಿತ್ತು. ಇದನ್ನು ವಿರೋಧಿಸಿ ಹಿಂದಿನ ಮೇಲುಸ್ತುವಾರಿ ಟ್ರಸ್ಟಿ ಬಾಲಚಂದ್ರ ದೀಕ್ಷಿತ್ ಮತ್ತು ಅರ್ಚಕರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

‘ಗೋಕರ್ಣ ದೇವಾಲಯವು ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆ 1997ಕ್ಕೆ ಒಳಪಡುತ್ತದೆ. ಆದ್ದರಿಂದ ಅದನ್ನು ಹಸ್ತಾಂತರ ಮಾಡಿರುವುದು ಸರಿಯಲ್ಲ’ ಎಂದು ದೀಕ್ಷಿತ್‌ ಪರ ವಕೀಲರು ವಾದಿಸಿದ್ದರು. ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಹಾಗೂ ಅರವಿಂದ ಕುಮಾರ ಅವರಿದ್ದ ವಿಭಾಗೀಯ ಪೀಠವು ದೇವಾಸ್ಥಾನವನ್ನು ಸರ್ಕಾರದ ವಶಕ್ಕೆ ನೀಡಬೇಕೆಂದು ಆದೇಶಿಸಿತ್ತು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ್, ಕುಮಟಾ ಉಪವಿಭಾಗಾಧಿಕಾರಿ ಲಕ್ಷ್ಮೀಪ್ರಿಯಾ, ದೇವಸ್ಥಾನದ ಆಡಳಿತಾಧಿಕಾರಿ ಹಾಲಪ್ಪ, ತಹಶೀಲ್ದಾರ್ ಮೇಘರಾಜ ನಾಯ್ಕ, ನಿರ್ಗಮಿತ ಆಡಳಿತಾಧಿಕಾರಿ ಜಿ.ಕೆ.ಹೆಗಡೆ, ಕುಮಟಾ ಸಿಪಿಐ ಸಂತೋಷ ಶೆಟ್ಟಿ, ಪಿಎಸ್ಐ ಸಂತೋಷಕುಮಾರ ಈ ಸಂದರ್ಭದಲ್ಲಿ ಇದ್ದರು.

ದೇವಸ್ಥಾನದ ಹಸ್ತಾಂತರವನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಸ್ಥಳೀಯ ಉಪಾಧಿವಂತರು ಹಾಗೂ ಅರ್ಚಕರು ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದರು. ಶಿವನ ಸ್ತುತಿ ಮಾಡುತ್ತಾ ದೇವಸ್ಥಾನದ ಪ್ರದಕ್ಷಿಣೆ ಹಾಕಿದರು.

ನ್ಯಾಯಾಂಗ ನಿಂದನೆ ದೂರಿಗೆ ಸಿದ್ಧತೆ

ಸರ್ಕಾರವು ದೇವಸ್ಥಾನದ ಉಸ್ತುವಾರಿಯನ್ನು ವಹಿಸಿಕೊಳ್ಳುವ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ದೂರು ದಾಖಲಿಸುವುದಾಗಿ ವಕೀಲ ಶಂಭು ಶರ್ಮ ಹೇಳಿದ್ದಾರೆ.

‘ಕೋರ್ಟ್ ಆದೇಶ ಬಂದ ದಿನದಿಂದ ಎಂಟು ವಾರಗಳ ಕಾಲ ದೇವಸ್ಥಾನವನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆ ನಡೆಸಬಾರದು ಎಂಬ ಆದೇಶವಿದೆ. ಆದರೆ, ಜಿಲ್ಲಾಧಿಕಾರಿ ಅದರ ವಿರುದ್ಧ ನಡೆದುಕೊಂಡಿದ್ದಾರೆ. ಹೀಗಾಗಿ ನಾವು ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ತಿಳಿಸಿದರು.

‘ಸುಪ್ರೀಂ’ನಲ್ಲಿ ಮುಂದಿನ ವಾರ ವಿಚಾರಣೆ

ನವದೆಹಲಿ: ಗೋಕರ್ಣ ದೇವಸ್ಥಾನ ನಿರ್ವಹಣೆ ಸಂಬಂಧ ಮುಂದಿನ ವಾರ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಬುಧವಾರ ತಿಳಿಸಿದೆ.

ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಮಚಂದ್ರಾಪುರ ಮಠಅರ್ಜಿಯನ್ನು ಸಲ್ಲಿಸಿದ್ದು, ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರ ಪೀಠ ವಿಚಾರಣೆ ನಡೆಸಲಿದೆ.

ದೇವಸ್ಥಾನಕ್ಕೆ ಮೇಲ್ವಿಚಾರಣಾ ಸಮಿತಿಯನ್ನು ನೇಮಿಸಿದ್ದ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸೆಪ್ಟೆಂಬರ್ 9ರಂದು ಸುಪ್ರೀಂಕೋರ್ಟ್ ನಿರಾಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.