ADVERTISEMENT

ಬಾಕಿ ಪಾವತಿಸಿ, ಇಲ್ಲವೇ ಜೈಲಿಗೆ ಹೋಗಿ: ಅನಿಲ್ ಅಂಬಾನಿಗೆ ‘ಸುಪ್ರೀಂ’ ತಾಕೀತು

ಪಿಟಿಐ
Published 20 ಫೆಬ್ರುವರಿ 2019, 19:56 IST
Last Updated 20 ಫೆಬ್ರುವರಿ 2019, 19:56 IST
   

ನವದೆಹಲಿ: ಮೊಬೈಲ್ ಜಾಲ ನಿರ್ವಹಣಾ ಕಂಪನಿ ಎರಿಕ್ಸನ್‌ಗೆ ₹ 453 ಕೋಟಿ ಬಾಕಿ ಮೊತ್ತ ಪಾವತಿಸಲು ನ್ಯಾಯಾಲಯ ನೀಡಿದ್ದ ಗಡುವನ್ನು ಉದ್ದೇಶಪೂರ್ವಕವಾಗಿ ಮೀರಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ರಿಲಯನ್ಸ್‌ ಕಮ್ಯುನಿಕೇಷನ್ಸ್ ಮುಖ್ಯಸ್ಥ ಅನಿಲ್‌ ಅಂಬಾನಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಾಲಯ ಆದೇಶ ಪಾಲಿಸದ ಅಂಬಾನಿ, ರಿಲಯನ್ಸ್ ಟೆಲಿಕಾಂ ಮುಖ್ಯಸ್ಥ ಸತೀಶ್ ಸೇಠ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್‌ನ ಚಯ್ಯಾ ವಿರಾನಿ ಅವರ ವರ್ತನೆಯನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನ್ಯಾಯಾಂಗ ನಿಂದನೆಗಾಗಿ ಮೂವರಿಗೂ ತಲಾ ₹ 1 ಕೋಟಿ ದಂಡ ವಿಧಿಸಲಾಗಿದೆ.

ADVERTISEMENT

ದಂಡದ ಮೊತ್ತ ಪಾವತಿಸಲು ವಿಫಲರಾದರೆ ಮೂವರೂ ಹೆಚ್ಚುವರಿಯಾಗಿ ಒಂದು ತಿಂಗಳು ಜೈಲುಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಆರ್‌.ಎಫ್.ನರಿಮನ್ ಮತ್ತು ವಿನೀತ್ ಶರಣ್‌ ಅವರ ದ್ವಿಸದಸ್ಯ ಪೀಠ ಎಚ್ಚರಿಕೆ ನೀಡಿದೆ.

ಕ್ಷಮೆ ಯಾಚನೆಗೆ ದೊರೆಯದ ಮನ್ನಣೆ: ‘ಎರಿಕ್ಸನ್‌ಗೆ ಹಣ ಪಾವತಿ ಮಾಡಲು ರಿಲಯನ್ಸ್‌ಗೆ ಈ ಹಿಂದೆಯೇ 120 ದಿನ ಕಾಲಾವಕಾಶ ನೀಡಿದ್ದೆವು. ನಂತರ ಆ ಗಡುವನ್ನು ಇನ್ನೂ 60 ದಿನಗಳಿಗೆ ವಿಸ್ತರಿಸಿದ್ದೆವು. ನಮ್ಮ ಆದೇಶವಿದ್ದರೂ ಬಾಕಿ ಹಣವನ್ನುರಿಲಯನ್ಸ್ ಪಾವತಿ ಮಾಡಿಲ್ಲ. ನ್ಯಾಯಾಲಯದ ಆದೇಶವನ್ನು ಅವರು ಉಲ್ಲಂಘಿಸಿರುವುದರಿಂದ, ಅವರ ಬೇಷರತ್ ಕ್ಷಮಯಾಚನೆಯನ್ನು ಮನ್ನಿಸಲು ಸಾಧ್ಯವಿಲ್ಲ’ ಎಂದು ಪೀಠವು ಸ್ಪಷ್ಟಪಡಿಸಿದೆ.

‘ನ್ಯಾಯಾಲಯದ ರಿಜಿಸ್ಟ್ರಾರ್‌ನಲ್ಲಿ ಈಗಾಗಲೇ ಠೇವಣಿ ಇರಿಸಿರುವ ₹ 118 ಕೋಟಿಯನ್ನು ಒಂದು ವಾರದ ಒಳಗೆ ಎರಿಕ್ಸನ್ ಕಂಪನಿಗೆ ನೀಡಬೇಕು. ಬಾಕಿ ಉಳಿದಿರುವ ಮೊತ್ತವನ್ನು ನಾಲ್ಕು ವಾರಗಳ ಒಳಗೆ ಪಾವತಿ ಮಾಡಬೇಕು’ ಎಂದು ಪೀಠವು ಆದೇಶಿಸಿದೆ.

ಗಡುವು ಮೀರಿದ್ದ ಆರ್‌ಕಾಂ

* ರಿಲಯನ್ಸ್‌ ಕಮ್ಯುನಿಕೇಷನ್ಸ್‌ನ (ಆರ್‌ಕಾಂ) ನೆಟ್‌ವರ್ಕ್ ಗೋಪುರಗಳು ಮತ್ತು ಫೈಬರ್ ಜಾಲವನ್ನು ಏಳು ವರ್ಷಗಳ ಅವಧಿಗೆ ನಿರ್ವಹಣೆ ಮಾಡಲು ಎರಿಕ್ಸನ್ ಕಂಪನಿ 2014ರಲ್ಲಿ ಒಪ್ಪಂದ ಮಾಡಿಕೊಂಡಿತ್ತು

* 2016ರಿಂದ ಆರ್‌ಕಾಂ ಯಾವುದೇ ಶುಲ್ಕ ಪಾವತಿಸದ ಕಾರಣ ಎರಿಕ್ಸನ್ ಕಂಪನಿಯು ರಾಷ್ಟ್ರೀಯ ಕಂಪನಿ ಕಾನೂನು ವ್ಯಾಜ್ಯ ನ್ಯಾಯಾಧೀಕರಣಕ್ಕೆ 2017ರ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸಿತ್ತು

* ಸೆಪ್ಟೆಂಬರ್ 30ರ ಒಳಗೆ ಬೇಷರತ್ ಆಗಿ ಬಾಕಿ ಪಾವತಿಸಲು ರಿಲಯನ್ಸ್ ಒಪ್ಪಿಕೊಂಡ ಕಾರಣ ಎರಿಕ್ಸನ್ ತನ್ನ ಅರ್ಜಿಯನ್ನು ವಾಪಸ್ ಪಡೆಯಿತು

* ಆದರೆ ಈ ಗಡುವನ್ನು ರಿಲಯನ್ಸ್ ಮೀರಿತು. ತನ್ನ ಸ್ವತ್ತುಗಳನ್ನು (ತರಂಗಾಂತರ, ನೆಟ್‌ವರ್ಕ್ ಗೋಪುರ, ಆಪ್ಟಿಕಲ್ ಫೈಬರ್ ಕೇಬಲ್ ಜಾಲ ಮತ್ತು ಕಚೇರಿ ಕಟ್ಟಡಗಳು) ಮಾರಾಟ ಮಾಡಿ ಬಾಕಿ ಪಾವತಿ ಮಾಡುವುದಾಗಿ ಹೇಳಿತು

* ಆರ್‌ಕಾಂ ಬೇರೆ ಬೇರೆ ಕಂಪನಿ ಮತ್ತು ಬ್ಯಾಂಕ್‌ಗಳಿಗೆ ಒಟ್ಟು ₹ 45,000 ಕೋಟಿ ಪಾವತಿ ಮಾಡಬೇಕಿರುತ್ತದೆ. ಈ ಕಾರಣದಿಂದ ಸ್ವತ್ತುಗಳ ಮಾರಾಟಕ್ಕೆ ಎಚ್‌ಎಸ್‌ಬಿಸಿ ಡೈಸಿ ಕಂಪನಿಯು ತಕರಾರು ಅರ್ಜಿಸಲ್ಲಿಸಿತು. ಆರ್‌ಕಾಂನ ಸ್ವತ್ತುಗಳ ಮಾರಾಟಕ್ಕೆ ಬಾಂಬೆ ಹೈಕೋರ್ಟ್ ತಡೆ ನೀಡಿತು. ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು

* ಆರ್‌ಕಾಂ ತನ್ನ ಸ್ವತ್ತುಗಳನ್ನು ರಿಲಯನ್ಸ್‌ ಜಿಯೊಗೆ ಮಾರಾಟ ಮಾಡಿತು. ಆದರೆ ‘ಮಾರಾಟಕ್ಕೆ ತಡೆ ಇರುವ ಕಾರಣ ಹಣ ವರ್ಗಾವಣೆಯಾಗಿಲ್ಲ’ ಎಂಬುದು ಆರ್‌ಕಾಂ ವಾದ

* ‘ರಫೇಲ್ ಯುದ್ಧವಿಮಾನ ತಯಾರಿಕೆಯಲ್ಲಿ ಹೂಡಿಕೆ ಮಾಡಲು,ಹೆಲಿಕಾಪ್ಟರ್‌ನಲ್ಲಿ ಓಡಾಡಲು ಅವರ ಬಳಿ ಹಣ ಇದೆ. ನಮ್ಮ ಬಾಕಿ ಪಾವತಿ ಮಾಡಲು ಹಣವಿಲ್ಲವೇ’ ಎಂಬುದು ಎರಿಕ್ಸನ್ ವಾದ

* 2018ರ ಡಿಸೆಂಬರ್ 15ರ ಒಳಗೆ ಬಾಕಿ ಹಣ ಪಾವತಿಸುವಂತೆ ಆರ್‌ಕಾಂಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ಗಡುವನ್ನೂ ಆರ್‌ಕಾಂ ಉಲ್ಲಂಘಿಸಿತು. ಹೀಗಾಗಿಯೇ ಆರ್‌ಕಾಂ ಈಗ ನ್ಯಾಯಾಂಗ ನಿಂದನೆಗೆ ಗುರಿಯಾಗಿದೆ

₹ 550 ಕೋಟಿ:ಎರಿಕ್ಸನ್‌ಗೆ ರಿಲಯನ್ಸ್ ಪಾವತಿ ಮಾಡಬೇಕಿದ್ದ ಬಾಕಿ

12 %:ಬಾಕಿ ಹಣದ ಮೇಲಿನ ಬಡ್ಡಿ ಪ್ರಮಾಣ

₹ 571 ಕೋಟಿ:ಬಡ್ಡಿ ಹಣ ಸೇರಿ ಪಾವತಿ ಮಾಡಬೇಕಿದ್ದ ಒಟ್ಟು ಹಣ

₹ 118 ಕೋಟಿ:ನ್ಯಾಯಾಲಯದಲ್ಲಿ ರಿಲಯನ್ಸ್ ಠೇವಣಿ ಇರಿಸಿರುವ ಮೊತ್ತ

**

ನಮ್ಮ ಕಂಪನಿಯ ಸ್ವತ್ತುಗಳನ್ನು ಹಸ್ತಾಂತರಿಸಲಾಗಿದೆ. ಆದರೆ ಮಾರಾಟಕ್ಕೆ ತಡೆ ನೀಡಿರುವುದರಿಂದ ನಮಗೆ ಸ್ವಲ್ಪ ಹಣವೂ ಬಂದಿಲ್ಲ. ಹಣವಿಲ್ಲದೆ ಪಾವತಿ ಮಾಡುವುದು ಹೇಗೆ?
-ಅನಿಲ್ ಅಂಬಾನಿ, ರಿಲಯನ್ಸ್ ಕಮ್ಯುನಿಕೇಷನ್ಸ್ ಮುಖ್ಯಸ್ಥ

ಸುಪ್ರೀಂ ಕೋರ್ಟ್‌ನ ಆದೇಶವನ್ನು ನಾವು ಗೌರವಿಸುತ್ತೇವೆ. ನಮ್ಮ ಕಕ್ಷಿದಾರ ಆರ್‌ಕಾಂ ಸಹ ನ್ಯಾಯಾಲಯದ ಆದೇಶವನ್ನು ಗೌರವಿಸುತ್ತದೆ ಎಂಬ ಭರವಸೆ ನನಗಿದೆ
-ಮುಕುಲ್ ರೋಹಟಗಿ, ಆರ್‌ಕಾಂ ಪರ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.