ADVERTISEMENT

ದೆಹಲಿ, ಹರಿದ್ವಾರದಲ್ಲಿ ದ್ವೇಷ ಭಾಷಣ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

ಪಿಟಿಐ
Published 12 ಜನವರಿ 2022, 9:44 IST
Last Updated 12 ಜನವರಿ 2022, 9:44 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ಇತ್ತೀಚೆಗೆ ಹರಿದ್ವಾರ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎರಡು ಕಾರ್ಯಕ್ರಮಗಳಲ್ಲಿ ದ್ವೇಷಪೂರಿತ ಭಾಷಣ ಮಾಡಿದವರ ವಿರುದ್ಧ ತನಿಖೆ ಮತ್ತು ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬುಧವಾರ ಕೇಂದ್ರ ಸರ್ಕಾರ ಮತ್ತು ಇತರರಿಂದ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದೆ.

ದ್ವೇಷ ಭಾಷಣದ ಘಟನೆಗಳ ಕುರಿತಂತೆ ಎಸ್‌ಐಟಿಯಿಂದ ‘ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆ’ಗೆ ನಿರ್ದೇಶನವನ್ನು ಕೋರಿ ಪತ್ರಕರ್ತ ಕುರ್ಬಾನ್ ಅಲಿ ಮತ್ತು ಪಾಟ್ನಾ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶೆ ಮತ್ತು ಹಿರಿಯ ವಕೀಲೆ ಅಂಜನಾ ಪ್ರಕಾಶ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದೆ.

ಪ್ರಕರಣದ ವಿಚಾರಣೆಯನ್ನು ಕೋರ್ಟ್ 10 ದಿನಗಳ ಕಾಲ ಮುಂದೂಡಿದೆ.

ADVERTISEMENT


‘2021ರ ಡಿಸೆಂಬರ್ 17 ಮತ್ತು 19ರ ನಡುವೆ ಹರಿದ್ವಾರ ಮತ್ತು ದೆಹಲಿಯಲ್ಲಿ’ನಡೆದ ಕಾರ್ಯಕ್ರಮದಲ್ಲಿ ಮಾಡಲಾಗಿದೆ ಎನ್ನಲಾದ ದ್ವೇಷ ಭಾಷಣಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿರುವ ಅರ್ಜಿದಾರರು, ಅಂತಹ ಭಾಷಣಗಳ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ನಿರ್ದಿಷ್ಟ ಮಾರ್ಗಸೂಚಿಗಳನ್ನು ಸೂಚಿಸುವಂತೆ ಕೋರಲಾಗಿದೆ.

ಒಂದು ಕಾರ್ಯಕ್ರಮವನ್ನು ಹರಿದ್ವಾರದಲ್ಲಿ ಯತಿ ನರಸಿಂಹಾನಂದ್ ಮತ್ತು ಇನ್ನೊಂದು ಕಾರ್ಯಕ್ರಮವನ್ನು ದೆಹಲಿಯಲ್ಲಿ 'ಹಿಂದೂ ಯುವ ವಾಹಿನಿ' ಆಯೋಜಿಸಿತ್ತು. ಅಲ್ಲಿ ಒಂದು ಸಮುದಾಯದ ಜನರ ನರಮೇಧಕ್ಕೆ ಕರೆ ನೀಡಲಾಗಿತ್ತು ಎಂಬ ಆರೋಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.