ADVERTISEMENT

ಮತ್ತೆ ಹೊಸ ಇನ್ನಿಂಗ್ಸ್‌ ಆರಂಭಿಸುವೆ: ನ್ಯಾಯಮೂರ್ತಿ ಎಂ.ಆರ್‌. ಶಾ

ಪಿಟಿಐ
Published 15 ಮೇ 2023, 15:43 IST
Last Updated 15 ಮೇ 2023, 15:43 IST
ಎಂ.ಆರ್‌. ಶಾ
ಎಂ.ಆರ್‌. ಶಾ   

ನವದೆಹಲಿ: ‘ನಿವೃತ್ತಿಯಾಗುವ ವ್ಯಕ್ತಿ ನಾನಲ್ಲ. ಬದುಕಿನಲ್ಲಿ ಮತ್ತೆ ಹೊಸ ಇನ್ನಿಂಗ್ಸ್‌ ಆರಂಭಿಸುತ್ತೇನೆ’ ಎಂದು ಸುಪ್ರೀಂ ಕೋರ್ಟ್‌ನಿಂದ ಸೋಮವಾರ ನಿವೃತ್ತಿಯಾದ ನ್ಯಾಯಮೂರ್ತಿ ಎಂ.ಆರ್‌. ಶಾ ಭಾವುಕರಾಗಿ ಹೇಳಿದರು.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅಧ್ಯಕ್ಷತೆಯಲ್ಲಿ ನ್ಯಾಯಾಲಯದ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಶಾ ಅವರು, ಬಾ‍ಲಿವುಡ್‌ ನಟ ರಾಜ್‌ಕಪೂರ್ ನಟನೆಯ ‘ಮೇರಾ ನಾಮ್‌ ಜೋಕರ್‌’ ಚಿತ್ರದ ‘ಜೀನಾ ಯಹಾ, ಮರ್‌ನಾ ಯಹಾ...’ ಗೀತೆಯಾದ ಸಾಲನ್ನು ಉದ್ಧರಿಸಿದರು.

‘ನನ್ನ ಹೊಸ ಇನ್ನಿಂಗ್ಸ್‌ಗೆ ಶಕ್ತಿ, ಧೈರ್ಯ ಹಾಗೂ ಒಳ್ಳೆಯ ಆರೋಗ್ಯ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದರು. ಭಾಷಣ ಮುಕ್ತಾಯಗೊಳಿಸುವಾಗ ‘ಕಲ್ ಖೇಲ್ ಮೇ ಹಮ್ ಹೋ ನಾ ಹೋ, ಗರ್ದಿಶ್ ಮೇ ತಾರೆ ರಹೇಂಗೆ ಸದಾ’ ಹಾಡನ್ನು ನೆನಪಿಸಿಕೊಂಡರು.

ADVERTISEMENT

2018ರ ನವೆಂಬರ್‌ 2ರಂದು ಶಾ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 

ಶಾ ಅವರೊಂದಿಗಿನ ಒಡನಾಟದ ಬಗ್ಗೆ ಸ್ಮರಿಸಿದ ಸಿಜೆಐ ಚಂದ್ರಚೂಡ್‌, ‘ಅವರೊಟ್ಟಿಗೆ ನ್ಯಾಯ‍ಪೀಠಗಳಲ್ಲಿ ಕುಳಿತು ಹಲವು ಪ್ರಕರಣಗಳ ವಿಚಾರಣೆ ನಡೆಸಿದ ಖುಷಿ ನನಗಿದೆ. ಸವಾಲುಗಳನ್ನು ಸ್ವೀಕರಿಸುವುದು ಅವರ ವಿಶಿಷ್ಟ ಗುಣ. ಕೋವಿಡ್‌ ವೇಳೆ ಅವರು ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಂಡಿದ್ದು ಇದಕ್ಕೊಂದು ನಿದರ್ಶನ’ ಎಂದರು. 

‘ಕೆಲಸದಿಂದ ಅವರು ಒಮ್ಮೆಯೂ ವಿಮುಖರಾಗಿದ್ದನ್ನು ನಾನು ನೋಡಿಲ್ಲ. ನಾನೊಂದು ತೀರ್ಪಿನ ಪ್ರತಿಯನ್ನು ಅವರಿಗೆ ಕಳುಹಿಸಿದರೆ ರಾತ್ರಿ ವೇಳೆಗೆ ಟಿಪ್ಪಣಿಗಳೊಂದಿಗೆ ಅದು ವಾಪಸ್ ಬರುತ್ತಿತ್ತು. ಅವರು ನನ್ನ ನಿಜವಾದ ಸ್ನೇಹಿತ. ಕೊಲಿಜಿಯಂ ಪ್ರಕ್ರಿಯೆಗಳಲ್ಲೂ ಅವರು ನನಗೆ ಸಹಕಾರ ನೀಡಿದ್ದಾರೆ’ ಎಂದರು.

‘ಗುಜರಾತ್‌, ಪಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅವರು ಉತ್ತಮ ಸೇವೆ ಸಲ್ಲಿಸಿದ್ದಾರೆ. ನ್ಯಾಯಾಂಗದ ಬಗ್ಗೆ ಅವರಿಗೆ ಅಪಾರ ಜ್ಞಾನವಿದೆ. ಜಿಲ್ಲಾ ಮತ್ತು ಹೈಕೋರ್ಟ್‌ಗಳ ಬಗ್ಗೆಯೂ ಆಳವಾದ ಪಾಂಡಿತ್ಯವಿದೆ’ ಎಂದರು.

ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಶಾ ಅವರಿಗೆ ಶುಭ ಕೋರಿದರು. ಸುಪ್ರೀಂ ಕೋರ್ಟ್‌ನ ಎಲ್ಲಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.