ADVERTISEMENT

ಇ.ಡಿ ನಿರ್ದೇಶಕರ ಅವಧಿ ವಿಸ್ತರಣೆ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಕೌಲ್‌

ಪಿಟಿಐ
Published 18 ನವೆಂಬರ್ 2022, 11:25 IST
Last Updated 18 ನವೆಂಬರ್ 2022, 11:25 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ) ನಿರ್ದೇಶಕರ ಅಧಿಕಾರ ಅವಧಿಯನ್ನು ಐದು ವರ್ಷಕ್ಕೆ ವಿಸ್ತರಣೆ ಮಾಡಿರುವುದು ಮತ್ತು ಇದಕ್ಕಾಗಿ ಕಾನೂನಿಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಎಸ್‌.ಕೆ. ಕೌಲ್‌ ಅವರು ಶುಕ್ರವಾರ ಹಿಂದೆ ಸರಿದಿದ್ದಾರೆ.

ಇ.ಡಿ. ನಿರ್ದೇಶಕ ಸಂಜಯ್‌ ಕುಮಾರ್ ಮಿಶ್ರಾ ಅಧಿಕಾರ ಅವಧಿಯನ್ನು ಮತ್ತೊಂದು ವರ್ಷ ವಿಸ್ತರಿಸಿ ಕೇಂದ್ರ ಸರ್ಕಾರ ಗುರುವಾರ ಆದೇಶಿಸಿತ್ತು.

ವಿಚಾರಣೆಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿರುವುದಕ್ಕೆ ಎಸ್‌.ಕೆ. ಕೌಲ್‌ ಅವರು ಯಾವುದೇ ಕಾರಣ ನೀಡಿಲ್ಲ. ಸಂಜಯ್‌ ಕುಮಾರ್ ಅವರ ಸೇವಾವಧಿಯನ್ನು ವಿಸ್ತರಿಸುವಂತಿಲ್ಲ ಎಂದು ಕಳೆದ ವರ್ಷ ಸುಪ್ರೀಂ ಕೋರ್ಟ್‌ ತಿಳಿಸಿತ್ತು.

ADVERTISEMENT

ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌ ಮತ್ತು ಎ.ಎಸ್‌.ಓಕಾ ಅವರಿದ್ದ ನ್ಯಾಯಪೀಠವು ಈ ಕುರಿತ ಅರ್ಜಿಗಳನ್ನು ವಿಚಾರಣೆ ನಡೆಸಿತ್ತು.

‘ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳ ವಿಚಾರಣೆ ಬಾಕಿ ಇರುವಾಗ ಕೇಂದ್ರ ಸರ್ಕಾರವು ಸಂಜಯ್‌ ಕುಮಾರ್ ಅವರ ಸೇವಾವಧಿ ವಿಸ್ತರಣೆ ಮಾಡಿರುವುದು ಹತಾಶೆ ತಂದಿದೆ’ ಎಂದು ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಕಕ್ಷಿದಾರರ ವಕೀಲರು ಈ ವಿಷಯವನ್ನು ತುರ್ತು ವಿಚಾರವಾಗಿ ಪರಿಗಣಿಸಿರುವುದರಿಂದ ಅಗತ್ಯ ಆದೇಶಗಳಿಗಾಗಿ ಇದನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯ ಮುಂದಿಡಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕಾಂಗ್ರೆಸ್‌ ಮುಖಂಡರಾದ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಜಯ ಠಾಕೂರ್‌, ಟಿಎಂಸಿಯ ಮಹುವಾ ಮೊಯಿತ್ರಾ ಮತ್ತು ಸಾಕೇತ್ ಗೋಖಲೆ ಅವರು ಸಲ್ಲಿಸಿದ್ದ ಅರ್ಜಿಗಳು ಪೀಠದ ಮುಂದೆ ವಿಚಾರಣೆಗೆ ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.