ADVERTISEMENT

ವಕ್ಫ್‌ ಕಾಯ್ದೆ: ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

ವಕ್ಫ್‌ ಕಾಯ್ದೆ–1995 ಪ್ರಶ್ನಿಸಿ ಮೇಲ್ಮನವಿ

​ಪ್ರಜಾವಾಣಿ ವಾರ್ತೆ
Published 27 ಮೇ 2025, 16:03 IST
Last Updated 27 ಮೇ 2025, 16:03 IST
–
   

ನವದೆಹಲಿ: ವಕ್ಫ್‌ ಕಾಯ್ದೆ–1995ರಲ್ಲಿನ ಕೆಲ ಅವಕಾಶಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿ ಮಾಡಿದೆ.

ಮುಖ್ಯನ್ಯಾಯಮೂರ್ತಿ ಬಿ.ಆರ್‌.ಗವಾಯಿ ಹಾಗೂ ನ್ಯಾಯಮೂರ್ತಿ ಆಗಸ್ಟೀನ್‌ ಜಾರ್ಜ್‌ ಮಸೀಹ್‌ ಅವರು ಇದ್ದ ನ್ಯಾಯಪೀಠವು, ವಕ್ಫ್‌ ಕಾಯ್ದೆ–1995 ಪ್ರಶ್ನಿಸಿ ನಿಖಿಲ್‌ ಉಪಾಧ್ಯಾಯ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ನೋಟಿಸ್‌ ಜಾರಿ ಮಾಡಿದೆ.

ವಕ್ಫ್‌ ಕಾಯ್ದೆ–1995ರಲ್ಲಿನ ಕೆಲ ಅವಕಾಶಗಳ ಸಿಂಧುತ್ವ ಪ್ರಶ್ನಿಸಿ ವಕೀಲ ವಿಷ್ಣುಶಂಕರ್ ಜೈನ್ ಅವರು ಅರ್ಜಿ ಸಲ್ಲಿಸಿದ್ದಾರೆ. ಇದೇ ವಿಚಾರವಾಗಿ ಸಲ್ಲಿಕೆಯಾಗಿರುವ ಇತರ ಅರ್ಜಿಗಳೊಂದಿಗೆ ಜೈನ್‌ ಅವರ ಅರ್ಜಿಯನ್ನು ಒಟ್ಟುಗೂಡಿಸಿ, ನ್ಯಾಯಪೀಠ ವಿಚಾರಣೆ ನಡೆಸಲಿದೆ.

ADVERTISEMENT

ವಕ್ಫ್‌ ಕಾಯ್ದೆ–1995ಕ್ಕೆ ಪ್ರಸಕ್ತ ವರ್ಷ ತಿದ್ದುಪಡಿ ತರಲಾಗಿದೆ.

ಇದಕ್ಕೂ ಮುನ್ನ, ಕೇಂದ್ರ ಸರ್ಕಾರ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಐಶ್ವರ್ಯಾ ಭಾಟಿ, ‘ವಕ್ಫ್‌ ಕಾಯ್ದೆಗೆ ಪ್ರಸಕ್ತ ವರ್ಷ ತಿದ್ದುಪಡಿ ತರುವುದಕ್ಕೂ ಮೊದಲೇ, ಈ ಕಾಯ್ದೆಯಲ್ಲಿನ ಅವಕಾಶಗಳ ಸಿಂಧುತ್ವ ಪ್ರಶ್ನಿಸಿ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದಾರೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ವಕ್ಫ್‌ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ಮಧ್ಯಂತರ ತಡೆಯಾಜ್ಞೆ ನೀಡುವುದಕ್ಕೆ ಸಂಬಂಧಿಸಿದ ತನ್ನ ಆದೇಶವನ್ನು ಮೇ 22ರಂದು ಕಾಯ್ದಿರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.