ADVERTISEMENT

ರಾಜಕೀಯ ಪಕ್ಷಗಳಿಗೆ ಧಾರ್ಮಿಕ ಹೆಸರು-ಚಿಹ್ನೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 16:13 IST
Last Updated 5 ಸೆಪ್ಟೆಂಬರ್ 2022, 16:13 IST
ಸುಪ್ರೀಂ ಕೋರ್ಟ್ 
ಸುಪ್ರೀಂ ಕೋರ್ಟ್    

ನವದೆಹಲಿ: ರಾಜಕೀಯ ಪಕ್ಷಗಳಿಗೆ ಧಾರ್ಮಿಕ ಹೆಸರು ಮತ್ತು ಚಿಹ್ನೆಗಳನ್ನು ನೀಡಿರುವುದನ್ನು ರದ್ದುಪಡಿಸಲು ಕೋರಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

ಲಖನೌ ಮೂಲದ ಸೈಯದ್ ವಸೀಂ ರಿಜ್ವಿ ಎಂಬುವರು ಅರ್ಜಿ ಸಲ್ಲಿಸಿದ್ದು, ಜನಪ್ರಾತಿನಿಧ್ಯ (ಆರ್‌ಪಿ) ಕಾಯ್ದೆ ಸೆಕ್ಷನ್ 123ರ ಪ್ರಕಾರ ಮತದಾರರಿಗೆ ಆಮಿಷವೊಡ್ಡಲು ಧರ್ಮವನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠದ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೌರವ್ ಭಾಟಿಯಾ, ಆರ್‌ಪಿ ಕಾಯ್ದೆ ಮತ್ತು ಸಂವಿಧಾನವನ್ನು ಉಲ್ಲಂಘಿಸಿ ರಾಜಕೀಯ ಪಕ್ಷಗಳು ತಮ್ಮಪಕ್ಷದ ಹೆಸರು ಮತ್ತು ಬಾವುಟದಲ್ಲಿ ಧಾರ್ಮಿಕ ಅರ್ಥವನ್ನು ಹೊಂದಬಹುದೇ ಎಂದು ನ್ಯಾಯಪೀಠಕ್ಕೆ ಕೇಳಿದರು.

ADVERTISEMENT

ಮಾನ್ಯತೆ ಪಡೆದಿರುವ ಎರಡು ಪಕ್ಷಗಳು ತಮ್ಮ ಹೆಸರಿನಲ್ಲಿ ‘ಮುಸ್ಲಿಂ’ ಎಂಬ ಪದವನ್ನು ಹೊಂದಿವೆ. ಅಂತೆಯೇ ಕೆಲವು ಪಕ್ಷಗಳು ತಮ್ಮ ಅಧಿಕೃತ ಬಾವುಟಗಳಲ್ಲಿ ಅರ್ಧಚಂದ್ರ ಮತ್ತು ನಕ್ಷತ್ರಗಳನ್ನು ಹೊಂದಿವೆ ಎಂದೂ ನ್ಯಾಯಪೀಠದ ಗಮನಕ್ಕೆ ತಂದರು.

ವಾದಗಳನ್ನು ಆಲಿಸಿದ ಬಳಿಕ ನ್ಯಾಯಪೀಠವು ಚುನಾವಣಾ ಆಯೋಗ ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದಕಾರ್ಯದರ್ಶಿಗೆ ಅ. 18ರೊಳಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.