ADVERTISEMENT

ಕೋವಿಡ್‌ ಪರಿಸ್ಥಿತಿ: ವೃದ್ಧೆಯ ಶಿಕ್ಷೆ ಅಮಾನತಿನಲ್ಲಿಟ್ಟ ‘ಸುಪ್ರೀಂ’

ವರದಕ್ಷಿಣೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 93 ವರ್ಷದ ವೃದ್ಧೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 15:30 IST
Last Updated 17 ಜನವರಿ 2021, 15:30 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ವರದಕ್ಷಿಣೆಗಾಗಿ ಸೊಸೆಯನ್ನು ಕೊಂದ ಪ್ರಕರಣದಲ್ಲಿ, 93 ವಯಸ್ಸಿನ ಮಹಿಳೆಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಕೋವಿಡ್‌ ಸ್ಥಿತಿ ಕಾರಣಕ್ಕೆ ಸುಪ್ರೀಂ ಕೋರ್ಟ್‌ ಅಮಾನತುಪಡಿಸಿದೆ.

ನ್ಯಾಯಮೂರ್ತಿ ಡಿ.‌ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯರ ನ್ಯಾಯಪೀಠ, ಕೊರೊನಾ ಪರಿಸ್ಥಿತಿಯಿಂದಾಗಿ ಮಹಿಳೆ ಸಾಕಮ್ಮ ಅವರಿಗೆ ವಿಧಿಸಲಾಗಿದ್ದ ಸಜೆಯನ್ನು ಅಮಾನತುಪಡಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಕರ್ನಾಟಕ ಸರ್ಕಾರದ ಪರ ವಾದಿಸಿದ ವಕೀಲ, ಮೈಸೂರು ಕಾರಾಗೃಹದ ದಾಖಲೆ ಉಲ್ಲೇಖಿಸಿ ಮಹಿಳೆಗೆ 86 ವರ್ಷ ಎಂದು ವಾದಿಸಿದರು.

ಐಪಿಸಿ ಸೆಕ್ಷನ್ 302 ಮತ್ತು 498ಎ ಅಡಿಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿ, ಚಾಮರಾಜನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು 2019ರ ಅ.16ರಂದು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದರು.

ADVERTISEMENT

ಸಾಕಮ್ಮ, ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ತೀರ್ಪು ಅಮಾನತಿನಲ್ಲಿಡಲು ಕೋರ್ಟ್‌ ನಿರಾಕರಿಸಿತ್ತು. ಬಳಿಕ ಮಹಿಳೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಅರ್ಜಿದಾರರ ಪರ ವಾದಿಸಿದ ವಕೀಲರು, ವಯಸ್ಸಿನ ಆಧಾರದಲ್ಲಿ ಮಹಿಳೆಗೆ ರಿಯಾಯಿತಿ ನೀಡಬೇಕು. ಅವರಿಗೀಗ 93 ವರ್ಷ. ಪ್ರಕರಣ 2012ರಲ್ಲಿನ ದಾಖಲೆ ಉಲ್ಲೇಖಿಸಿ 86 ವರ್ಷ ಎಂದು ಹೇಳಲಾಗಿದೆ ಎಂದು ಕೋರ್ಟ್‌ ಗಮನಕ್ಕೆ ತಂದರು.

ಅಂತಿಮವಾಗಿ ಪೀಠ, ವಯಸ್ಸು 86 ಅಥವಾ 93 ಯಾವುದೇ ಇರಲಿ. ಸದ್ಯದ ಕೋವಿಡ್‌ ಸ್ಥಿತಿ ಗಮನದಲ್ಲಿರಿಸಿಕೊಂಡು ಸಜೆ ಕುರಿತ ಆದೇಶವನ್ನು ಅಮಾನತಿನಲ್ಲಿ ಇರಿಸಲಾಗುವುದು. ವಯಸ್ಸನ್ನಷ್ಟೇ ಪರಿಗಣಿಸಿ ಈ ಅದೇಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿತು.

‌ಚಾಮರಾಜನಗರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ವಿಧಿಸುವ ಷರತ್ತಿಗೆ ಒಳಪಟ್ಟು ಮಹಿಳೆಯನ್ನು ಬಿಡುಗಡೆ ಮಾಡಬೇಕು ಎಂದು ಪೀಠವು ಆದೇಶಿಸಿತು. ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಸಂಜೀವ್ ಖನ್ನಾ ಅವರು ಪೀಠದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.