ADVERTISEMENT

₹1.47 ಲಕ್ಷ ಕೋಟಿ ಬಾಕಿ ಪಾವತಿಸದ ಮೊಬೈಲ್‌ ಕಂಪೆನಿಗಳಿಗೆ ಕೋರ್ಟ್‌ ತೀವ್ರ ತರಾಟೆ

ಕಂಪೆನಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಯಾಕೆ ದಾಖಲಿಸಿಕೊಳ್ಳಬಾರದು ಎಂದೂ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 1:48 IST
Last Updated 15 ಫೆಬ್ರುವರಿ 2020, 1:48 IST
ಸಸಸ
ಸಸಸ   

ನವದೆಹಲಿ: ಹೊಂದಾಣಿಕೆ ಮಾಡಿದ ಒಟ್ಟು ವರಮಾನಕ್ಕೆ (ಎಜಿಆರ್‌) ಸಂಬಂಧಿಸಿ ಕೇಂದ್ರಕ್ಕೆ ₹1.47 ಲಕ್ಷ ಕೋಟಿ ಯಾಕೆ ಪಾವತಿಸಿಲ್ಲ ಎಂದು ದೂರಸಂಪರ್ಕ ಕಂಪೆನಿಗಳನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಕಂಪೆನಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಯಾಕೆ ದಾಖಲಿಸಿಕೊಳ್ಳಬಾರದು ಎಂದೂ ಪ್ರಶ್ನಿಸಿದೆ. ಹಣ ಪಾವತಿಸುವಂತೆ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶಕ್ಕೆ ತಡೆ ನೀಡಿದ್ದ ದೂರಸಂ‍ಪರ್ಕ ಇಲಾಖೆಯ ಅಧಿಕಾರಿಯನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದೆ.

‘ಸುಪ್ರೀಂ ಕೋರ್ಟ್‌ ಅನ್ನು ನಾವು ಈಗ ಮುಚ್ಚಬೇಕೇ? ಇದು ಹಣದ ಮದ ಅಲ್ಲವೇ? ಇದನ್ನು ಪ್ರಾಯೋಜಿಸುತ್ತಿರುವವರು ಯಾರು? ಎಲ್ಲರ ವಿರುದ್ಧವೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಕೊಳ್ಳಲಾಗುವುದು’ ಎಂದು ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಪೀಠವು ಆಕ್ರೋಶಗೊಂಡಿತು.

ಪಾವತಿಸುವಂತೆ ಆದೇಶಿಸಿರುವ ಮೊತ್ತವನ್ನು ಪಾವತಿಸದೇ ಇದ್ದರೆ, ದೂರಸಂಪರ್ಕ ಕಂಪೆನಿಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಮಾರ್ಚ್‌ 17ರಂದು ನ್ಯಾಯಪೀಠದ ಮುಂದೆ ಖುದ್ದಾಗಿ ಹಾಜರಾಗಬೇಕಾಗುತ್ತದೆ ಎಂದು ಪೀಠ ಹೇಳಿದೆ. ಪಾವತಿಸಬೇಕಾದ ಮೂಲ ಮೊತ್ತವು ₹92 ಸಾವಿರ ಕೋಟಿ ಇತ್ತು. ಬಡ್ಡಿ ಮತ್ತು ದಂಡ ಸೇರಿಸಿ ಅದು ಈಗ ₹1.47 ಲಕ್ಷ ಕೋಟಿಗೆ ಏರಿದೆ.

ADVERTISEMENT

ಹಣ ಪಾವತಿಯ ಗಡುವನ್ನು ವಿಸ್ತರಿಸಬೇಕು ಎಂದು ದೂರಸಂಪರ್ಕ ಕಂಪನಿಗಳು ಕೋರಿಕೊಂಡವು. ಆದರೆ, ಅದನ್ನು ಕೋರ್ಟ್‌ ತಿರಸ್ಕರಿಸಿದೆ. ಯಾಕೆಂದರೆ, 2019ರ ಅಕ್ಟೋಬರ್‌ನಲ್ಲಿ ನೀಡಿದ್ದ ಆದೇಶದ ಮೇಲ್ಮನವಿಯನ್ನೂ ಈ ಜನವರಿಯಲ್ಲಿ ತಳ್ಳಿ ಹಾಕಲಾಗಿದೆ.

ಈ ನ್ಯಾಯಾಲಯಕ್ಕೆ ಯಾವ ಬೆಲೆಯೂ ಇಲ್ಲವೇ? ದೇಶದಲ್ಲಿ ಏನು ನಡೆಯುತ್ತಿದೆ? ಈ ಎಲ್ಲ ಕಂಪೆನಿಗಳು ಒಂದು ಪೈಸೆಯನ್ನೂ ಪಾವತಿಸಿಲ್ಲ. ಅದಲ್ಲದೆ, ನಮ್ಮ ಆದೇಶಕ್ಕೆ ತಡೆ ಕೊಡುವ ಧಾರ್ಷ್ಟ್ಯವನ್ನೂ ನಿಮ್ಮ ಅಧಿಕಾರಿ ತೋರಿದ್ದಾರೆ’ ಎಂದು ಪೀಠವು, ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾಗೆ ಹೇಳಿತು.

ಸಾಂವಿಧಾನಿಕ ಪ್ರಾಧಿಕಾರವಾಗಿರುವ ಪ್ರಧಾನ ಲೆಕ್ಕಾಧಿಕಾರಿಗೆ (ಅಕೌಂಟೆಂಟ್‌ ಜನರಲ್‌) ಪತ್ರ ಬರೆದು ‘ಪಾವತಿಗಾಗಿ ಒತ್ತಡ ಹಾಕಬೇಡಿ ಮತ್ತು ಮುಂದಿನ ಆದೇಶದವರೆಗೆ ಕ್ರಮವನ್ನೂ ಕೈಗೊಳ್ಳಬೇಡಿ’ ಎಂದು ಅಧಿಕಾರಿ ಹೇಳಿದ್ದಾರೆ. ಶುಕ್ರವಾರವೇ ಈ ಆದೇಶವನ್ನು ಹಿಂದಕ್ಕೆ ಪಡೆಯದಿದ್ದರೆ ಆ ಅಧಿಕಾರಿಯನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಪೀಠವು ಎಚ್ಚರಿಸಿತು.

ಕಂಪನಿಗಳ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರು ಮಧ್ಯಪ್ರವೇಶಕ್ಕೆ ಯತ್ನಿಸಿದರು. ಆದರೆ, ಪೀಠವು ಇದಕ್ಕೆ ಅವಕಾಶ ಕೊಡಲಿಲ್ಲ. ‘ಈವರೆಗೆ ನಡೆದಿರುವುದು ಸಂಪೂರ್ಣವಾಗಿ ಅಸಂಬದ್ಧ. ಏನು ಹೇಳಬೇಕಿದೆಯೋ ಅದನ್ನು ಈಗಾಗಲೇ ಹೇಳಿದ್ದೇವೆ. ಇಡೀ ವ್ಯವಸ್ಥೆಯನ್ನು ನೀವು ಯಾವ ಸ್ಥಿತಿಗೆ ತಂದು ಇರಿಸಿದ್ದೀರಿ’ ಎಂದು ಪೀಠವು ಆಕ್ರೋಶಗೊಂಡಿತು.

ಮರುಪರಿಶೀಲನೆ ಅರ್ಜಿ ವಜಾಗೊಂಡ ಬಳಿಕವೂ ಈ ಕಂಪೆನಿಗಳು ಹಣ ಪಾವತಿಸಿಲ್ಲ. ಕೋರ್ಟ್‌ನ ನಿರ್ದೇಶನದ ಬಗ್ಗೆ ಸ್ವಲ್ಪ ಗೌರವವೂ ಇದ್ದಂತೆ ಕಾಣಿಸುತ್ತಿಲ್ಲ

- ಸುಪ್ರೀಂ ಕೋರ್ಟ್‌ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.