ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಟುಂಬದ ಆರು ಮಂದಿಯ ಪೌರತ್ವದ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅವರನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡದಂತೆ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.
ವೀಸಾ ಅವಧಿ ಮುಗಿದಿದ್ದರೂ ಭಾರತದಲ್ಲಿ ವಾಸವಿರುವ ಆರೋಪ ಅವರ ಮೇಲಿದೆ.
ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಎನ್.ಕೋಟೀಶ್ವರ ಸಿಂಗ್ ಅವರು, ಯಾವುದೇ ಕಾಲಮಿತಿ ನಿಗದಿ ಮಾಡದೆ, ಆ ಕುಟುಂಬದ ಪಾಸ್‌ಪೋರ್ಟ್, ಆಧಾರ್, ಪಾನ್ ಕಾರ್ಡ್ ಮತ್ತಿತರ ಗುರುತಿನ ದಾಖಲೆಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಿರ್ದಿಷ್ಟ ನಿರ್ಧಾರ ಕೈಗೊಳ್ಳುವವರೆಗೂ ಅಧಿಕಾರಿಗಳು ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ. ಅರ್ಜಿದಾರರು ಅಂತಿಮ ತೀರ್ಪಿನಿಂದ ಅತೃಪ್ತರಾದಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್ ಹೈಕೋರ್ಟ್ ಮೊರೆ ಹೋಗಬಹುದು ಎಂದು ನ್ಯಾಯಪೀಠ ತಿಳಿಸಿತು.
ಪಹಲ್ಗಾಮ್ ದಾಳಿ ನಂತರ ಕಾಶ್ಮೀರದಲ್ಲಿ ನೆಲಸಿರುವ ಕುಟುಂಬವು ಗಡೀಪಾರು ಸವಾಲು ಎದುರಿಸುತ್ತಿದೆ. ಕುಟುಂಬದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಭಾರತೀಯ ದಾಖಲೆಗಳಿದ್ದರೂ ಬಂಧಿಸಿ ಗಡೀಪಾರು ಮಾಡಲು ವಾಘಾ ಗಡಿಗೆ ಕೊಂಡೊಯ್ದಿದ್ದಾಗಿ ಅಹ್ಮದ್ ತಾರೀಕ್ ಭಟ್ ಮತ್ತು ಅವರ ಕುಟುಂಬದ ಐದು ಮಂದಿ ಆರೋಪಿಸಿ, ಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.