ADVERTISEMENT

ಅಲೋಪಥಿ ಪದ್ಧತಿ ಅಪಹಾಸ್ಯ: ಬಾಬಾ ರಾಮದೇವ್‌ಗೆ ‘ಸುಪ್ರೀಂ’ ತರಾಟೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 14:01 IST
Last Updated 23 ಆಗಸ್ಟ್ 2022, 14:01 IST
ಬಾಬಾ ರಾಮದೇವ್‌
ಬಾಬಾ ರಾಮದೇವ್‌   

ನವದೆಹಲಿ: ಕೋವಿಡ್‌–19 ಪಿಡುಗಿನ ಸಂದರ್ಭದಲ್ಲಿ ಅಲೋಪಥಿ ಚಿಕಿತ್ಸಾಪದ್ಧತಿ ಹಾಗೂ ಈ ಪದ್ಧತಿಯ ವೈದ್ಯರಿಗೆ ಅವಮಾನಿಸುವ ರೀತಿಯಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಯೋಗ ಗುರು ಬಾಬಾ ರಾಮದೇವ್‌ ಅವರನ್ನು ಸುಪ್ರೀಂಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿತು.

‘ಅಲೋಪಥಿಯಂತಹ ಆಧುನಿಕ ಚಿಕಿತ್ಸಾ ಪದ್ಧತಿಯನ್ನು ಟೀಕಿಸುವ ವೇಳೆ ಸಂಯಮ ಇರಲಿ’ ಎಂದು ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠ, ಬಾಬಾ ರಾಮದೇವ್‌ ಅವರಿಗೆ ಸೂಚಿಸಿತು.

‘ಬಾಬಾ ರಾಮದೇವ್‌ ಅವರ ಮಾತಿಗೆ ಕೇಂದ್ರ ಸರ್ಕಾರವೇ ಕಡಿವಾಣ ಹಾಕುವುದು ಒಳ್ಳೆಯದು’ ಎಂದು ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ಅವರಿಗೆ ನ್ಯಾಯಪೀಠ ಹೇಳಿತು. ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್‌ ಹಾಗೂ ಹಿಮಾ ಕೊಹ್ಲಿ ಈ ನ್ಯಾಯಪೀಠದಲ್ಲಿದ್ದಾರೆ.

ADVERTISEMENT

‘ಬಾಬಾ ರಾಮದೇವ್‌ ಅವರುಅಲೋಪಥಿ ವೈದ್ಯರನ್ನು ಯಾಕೆ ಟೀಕಿಸುತ್ತಾರೆ?. ಅವರು ಯೋಗವನ್ನು ಜನಪ್ರಿಯಗೊಳಿಸಿದ್ದಾರೆ. ಅದು ಒಳ್ಳೆಯದೇ. ಆದರೆ, ಅವರು ಮತ್ತೊಂದು ವೈದ್ಯಪದ್ಧತಿಯನ್ನು ಟೀಕಿಸಬಾರದು’ ಎಂದು ನ್ಯಾಯಪೀಠ ಹೇಳಿತು.

ಇತರ ವೈದ್ಯಪದ್ಧತಿಗಳನ್ನು ಅಪಹಾಸ್ಯ ಮಾಡುವ ರಾಮದೇವ್‌ ಅವರನ್ನು ಟೀಕಿಸಿದ ನ್ಯಾಯಪೀಠ, ‘ಅಲೋಪಥಿ ವೈದ್ಯರು ಕೊಲೆಗಾರರು ಎಂಬ ರೀತಿಯಲ್ಲಿ ಯಾಕೆ ಬಾಬಾ ರಾಮದೇವ್‌ ಟೀಕೆ ಮಾಡುತ್ತಾರೆ’ ಎಂದು ಪ್ರಶ್ನಿಸಿತು.

ಅಲೋಪಥಿ ವಿರುದ್ದಬಾಬಾ ರಾಮದೇವ್‌ ಅವರು ಪ್ರಕಟಿಸಿದ್ದ ಜಾಹೀರಾತುಗಳನ್ನು ಪ್ರಸ್ತಾಪಿಸಿದ ಮುಖ್ಯನ್ಯಾಯಮೂರ್ತಿ, ‘ಎಲ್ಲ ಕಾಯಿಲೆಗಳನ್ನು ಆಯುರ್ವೇದ ಗುಣಪಡಿಸುತ್ತದೆ ಎಂಬುದಕ್ಕೆ ಖಾತ್ರಿ ಏನಿದೆ’ ಎಂದು ಪ್ರಶ್ನಿಸಿದರು.

ಬಾಬಾ ರಾಮದೇವ್‌ ಅವರು ಅಲೋಪಥಿ ಪದ್ಧತಿಗೆ ಕಳಂಕ ತರುವಂತಹ ಜಾಹೀರಾತುಗಳನ್ನು ಪ್ರಕಟಿಸಿದ್ದಾರೆ ಎಂದು ದೂರಿ ಐಎಂಎ, ಕೋರ್ಟ್‌ ಮೆಟ್ಟಿಲೇರಿದೆ. ಐಎಂಎ ಪರವಾಗಿ ವಕೀಲ ಪ್ರಭಾಸ್ ಬಜಾಜ್‌ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.