ADVERTISEMENT

ರಾಜ್ಯಪಾಲರ ಕೆಲಸಕ್ಕೆ ಕಾಲಮಿತಿ: ಸುಪ್ರೀಂ ಕೋರ್ಟ್‌ ‘ಐತಿಹಾಸಿಕ’ ತೀರ್ಪು

ಪಿಟಿಐ
Published 9 ಏಪ್ರಿಲ್ 2025, 10:08 IST
Last Updated 9 ಏಪ್ರಿಲ್ 2025, 10:08 IST
<div class="paragraphs"><p>‘ಸುಪ್ರೀಂ’</p></div>

‘ಸುಪ್ರೀಂ’

   

ನವದೆಹಲಿ: ಮೈಲಿಗಲ್ಲು ಎಂಬಂತಹ ತೀರ್ಪೊಂದನ್ನು ಪ್ರಕಟಿಸಿರುವ ಸುಪ್ರೀಂ ಕೋರ್ಟ್‌, ರಾಜ್ಯ ವಿಧಾನ ಮಂಡಲ ಅಂಗೀಕಾರ ನೀಡಿರುವ ಮಸೂದೆಯ ವಿಚಾರವಾಗಿ ಕ್ರಮಗಳನ್ನು ಕೈಗೊಳ್ಳಲು ರಾಜ್ಯಪಾಲರಿಗೆ ಸಮಯಮಿತಿ ನಿಗದಿ ಮಾಡಿದೆ.

ತಮಿಳುನಾಡಿನ ರಾಜ್ಯಪಾಲ ಆರ್‌.ಎನ್. ರವಿ ಅವರು 10 ಮಸೂದೆಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗಾಗಿ ತಡೆಹಿಡಿದು ಇರಿಸಿಕೊಂಡಿದ್ದು ಸಂವಿಧಾನಕ್ಕೆ ವಿರುದ್ಧವಾದ ನಡೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. 

ADVERTISEMENT

ಸುಪ್ರೀಂ ಕೋರ್ಟ್‌ನ ಈ ತೀರ್ಪು ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರಕ್ಕೆ ಸಿಕ್ಕ ದೊಡ್ಡ ಜಯ ಎಂದು ವ್ಯಾಖ್ಯಾನಿಸಲಾಗಿದೆ.

‘10 ಮಸೂದೆಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗಾಗಿ ತಡೆಹಿಡಿದ ರಾಜ್ಯಪಾಲರ ಕ್ರಮವು ಅಕ್ರಮ, ಮನಸೋಇಚ್ಛೆ ತೀರ್ಮಾನ. ಹೀಗಾಗಿ, ಆ ಕ್ರಮವನ್ನು ಅಸಿಂಧುಗೊಳಿಸಲಾಗಿದೆ’ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.

‘10 ಮಸೂದೆಗಳು ರಾಜ್ಯಪಾಲರಿಗೆ ಸಲ್ಲಿಕೆಯಾದ ದಿನದಿಂದಲೇ ಅವರ ಅಂಕಿತ ಪಡೆದಿವೆ ಎಂದು ಭಾವಿಸತಕ್ಕದ್ದು’ ಎಂದು ಪೀಠವು ಸಾರಿದೆ.

ಸಂವಿಧಾನದ 142ನೆಯ ವಿಧಿಯ ಅಡಿಯಲ್ಲಿ ತನಗೆ ಇರುವ ಅಸಾಮಾನ್ಯ ಅಧಿಕಾರವನ್ನು ಬಳಸಿಕೊಂಡಿರುವ ಸುಪ್ರೀಂ ಕೋರ್ಟ್‌, ತಮಿಳುನಾಡಿನ ರಾಜ್ಯಪಾಲರಿಗೆ ಮರುಸಲ್ಲಿಕೆಯಾಗಿದ್ದ ಮಸೂದೆಗಳು ಅಂಕಿತ ಪಡೆದಿವೆ ಎಂದು ಭಾವಿಸಬೇಕು ಎಂದು ಸಾರಿದೆ.

ವಿಧಾನ ಮಂಡಲದ ತೀರ್ಮಾನಕ್ಕೆ ಅಡ್ಡಿ ಸೃಷ್ಟಿಸಬಾರದು, ಜನರ ಇಚ್ಛೆಗೆ ಅಡ್ಡಿ ಉಂಟುಮಾಡಬಾರದು ಎಂಬ ಪ್ರಜ್ಞೆ ರಾಜ್ಯಪಾಲರಿಗೆ ಇರಬೇಕು ಎಂದು ಪೀಠವು ಕಿವಿಮಾತು ಹೇಳಿದೆ.

‘ಪ್ರಜಾತಾಂತ್ರಿಕ ಅಭಿವ್ಯಕ್ತಿಯ ಮೂಲಕ ಜನರಿಂದ ಆಯ್ಕೆಯಾಗಿರುವ ವಿಧಾನ ಮಂಡಲದ ಸದಸ್ಯರು ರಾಜ್ಯದ ಜನರ ಒಳಿತನ್ನು ಖಾತರಿಪಡಿಸುವ ವಿಚಾರವಾಗಿ ಹೆಚ್ಚು ಅರಿವು ಹೊಂದಿರುತ್ತಾರೆ’ ಎಂದು ಅದು ಬಣ್ಣಿಸಿದೆ.

ಸಂವಿಧಾನದ 200ನೆಯ ವಿಧಿಯ ಅಡಿಯಲ್ಲಿ ರಾಜ್ಯಪಾಲರಿಗೆ ವಿವೇಚನಾ ಅಧಿಕಾರ ಇಲ್ಲ. ಅವರು ರಾಜ್ಯದ ಮಂತ್ರಿ ಪರಿಷತ್ತಿನ ಸಲಹೆ ಮತ್ತು ನೆರವಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕೂಡ ಕೋರ್ಟ್ ಸ್ಪಷ್ಟಪಡಿಸಿದೆ.

ತಮಗೆ ಸಲ್ಲಿಸಲಾದ ಮಸೂದೆಗೆ ಅಂಕಿತ ಹಾಕುವ, ಅಂಕಿತವನ್ನು ತಡೆಹಿಡಿಯುವ ಅಥವಾ ಅದನ್ನು ರಾಷ್ಟ್ರಪತಿಯವರ ಪರಿಶೀಲನೆಗಾಗಿ ಇರಿಸಿಕೊಳ್ಳುವ ಅಧಿಕಾರವನ್ನು 200ನೆಯ ವಿಧಿಯು ರಾಜ್ಯಪಾಲರಿಗೆ ನೀಡುತ್ತದೆ.

ರಾಜ್ಯಪಾಲರು ಮಸೂದೆಗಳ ವಿಚಾರವಾಗಿ ತೀರ್ಮಾನವನ್ನೇ ತೆಗೆದುಕೊಳ್ಳದೆ, ‘ಪ್ರಶ್ನಾತೀತವಾದ ಪರಮಾಧಿಕಾರ’ವನ್ನು ಹೊಂದಲು ಅವಕಾಶ ಇಲ್ಲ. ವಿಧಾನಸಭೆಯು ಅಂಗೀಕಾರ ನೀಡಿದ ಮಸೂದೆಯ ವಿಚಾರವಾಗಿ ರಾಜ್ಯಪಾಲರು ಯಾವುದೇ ಕ್ರಮ ಕೈಗೊಳ್ಳದೆ ಅದನ್ನು ‘ಕಾಗದದ ತುಣುಕನ್ನಾಗಿ’ ಮತ್ತು ‘ಮಾಂಸವಿಲ್ಲದೆ ಅಸ್ಥಿಪಂಜರವನ್ನಾಗಿ’ ಮಾಡಿದ್ದರು ಎಂದು ಪೀಠವು ಹೇಳಿದೆ.

ರಾಜ್ಯಪಾಲ ರವಿ ಅವರು ಕೆಲವು ಮಸೂದೆಗಳಿಗೆ ಅಂಕಿತ ಹಾಕುವುದನ್ನು ವಿಳಂಬ ಮಾಡಿದ ಕಾರಣದಿಂದಾಗಿ ತಮಿಳುನಾಡು ಸರ್ಕಾರವು 2023ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. 2020ರಲ್ಲಿ ರಾಜ್ಯಪಾಲರಿಗೆ ಕಳುಹಿಸಿದ ಒಂದು ಮಸೂದೆ ಸೇರಿದಂತೆ ಒಟ್ಟು 12 ಮಸೂದೆಗಳು ಅವರ ಬಳಿ ಬಾಕಿ ಇವೆ ಎಂದು ರಾಜ್ಯ ಸರ್ಕಾರವು ಉಲ್ಲೇಖಿಸಿತ್ತು.

ರಾಜ್ಯಪಾಲರಿಗೆ ಮಸೂದೆಗಳ ವಿಚಾರವಾಗಿ ಸುಪ್ರೀಂ ಕೋರ್ಟ್‌ ಈ ರೀತಿ  ಮಾರ್ಗದರ್ಶನ ನೀಡಿರುವುದು ಇದೇ ಮೊದಲು.

ಜನರ, ಅಂದರೆ ವಿಧಾನ ಮಂಡಲದ ಆಯ್ಕೆಗೆ ವಿರುದ್ಧವಾಗಿ ಯಾವುದೇ ಕ್ರಮ ಕೈಗೊಂಡರೆ ರಾಜ್ಯಪಾಲರು ತಾವು ಸ್ವೀಕರಿಸಿದ ಪ್ರತಿಜ್ಞೆಗೆ ವಿರುದ್ಧವಾಗಿ ನಡೆದುಕೊಂಡಂತೆ ಆಗುತ್ತದೆ. ರಾಜ್ಯಪಾಲರು ತಮ್ಮ ಹೊಣೆಯನ್ನು ಸ್ನೇಹಿತನಾಗಿ, ದಾರ್ಶನಿಕನಾಗಿ, ಮಾರ್ಗದರ್ಶಕನಾಗಿ ಯಾವುದೇ ರಾಗ–ದ್ವೇಷಗಳಿಲ್ಲದೆ ನಿರ್ವಹಿಸಬೇಕು. ರಾಜಕೀಯ ಲೆಕ್ಕಾಚಾರಗಳು ಅವರ ಮೇಲೆ ಪ್ರಭಾವ ಬೀರಬಾರದು.
– ಸುಪ್ರೀಂ ಕೋರ್ಟ್‌

ಕೋರ್ಟ್‌ ನಿಗದಿ ಮಾಡಿದ ಕಾಲಮಿತಿ

ಸಂವಿಧಾನದ 200ನೆಯ ವಿಧಿಯು ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯಪಾಲರಿಗೆ ಕಾಲಮಿತಿಯನ್ನು ವಾಚ್ಯವಾಗಿ ಹೇಳಿಲ್ಲ.

‘ಸಮಯಮಿತಿ ನಿಗದಿ ಮಾಡದೆ ಇದ್ದರೂ, ತಮ್ಮ ಅಂಕಿತಕ್ಕಾಗಿ ಕಳುಹಿಸಿರುವ ಮಸೂದೆಗಳ ಕುರಿತು ಕ್ರಮ ಕೈಗೊಳ್ಳದೆ ಇರಲು 200ನೇ ವಿಧಿಯು ಅವಕಾಶ ಮಾಡಿಕೊಡುತ್ತದೆ ಎಂಬಂತೆ ಅರ್ಥ ಮಾಡಿಕೊಳ್ಳಬಾರದು’ ಎಂದು ಪೀಠವು ಸ್ಪಷ್ಟವಾಗಿ ಹೇಳಿದೆ.

  • ಮಸೂದೆಗೆ ಅಂಕಿತ ಹಾಕುವುದನ್ನು ತಡೆಹಿಡಿದು, ಅದನ್ನು ರಾಷ್ಟ್ರಪತಿ
    ಯವರ ಪರಿಶೀಲನೆಗೆ ಕಳುಹಿಸುವುದಿದ್ದರೆ ಗರಿಷ್ಠ 1 ತಿಂಗಳಲ್ಲಿ ಮಾಡಬೇಕು.

  • ರಾಜ್ಯಪಾಲರು ಮಸೂದೆಗೆ ಅಂಕಿತವನ್ನು ತಡೆಹಿಡಿದರೆ, ಮಸೂದೆಯನ್ನು ಮೂರು ತಿಂಗಳ ಒಳಗೆ ವಿಧಾನಸಭೆಗೆ ಮರಳಿಸಬೇಕು.

  • ವಿಧಾನಸಭೆಯು ಮಸೂದೆಯನ್ನು ಪುನಃ ಪರಿಶೀಲಿಸಿ ರಾಜ್ಯಪಾಲರಿಗೆ ಸಲ್ಲಿಸಿದಾಗ, ಅವರು ಅದಕ್ಕೆ ಒಂದು ತಿಂಗಳಲ್ಲಿ ಅಂಕಿತ ಹಾಕಬೇಕು.

  • ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಲು ರಾಜ್ಯ‍ಪಾಲರು ವಿಫಲರಾದಲ್ಲಿ ನ್ಯಾಯಾಂಗವು ಆ ವೈಫಲ್ಯವನ್ನು ಪರಿಶೀಲನೆಗೆ ಒಳಪಡಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

200ನೆಯ ವಿಧಿ ಹೇಳುವುದೇನು?

200ನೇ ವಿಧಿಯಲ್ಲಿ ಹೇಳಿರುವ ನಿಯಮದ ಪ್ರಕಾರ ರಾಜ್ಯಪಾಲರು ಯಾವುದಾದರೂ ಒಂದು ಹಾದಿ ತುಳಿಯಬೇಕು.

ಅಂದರೆ, ಅವರು ಮಸೂದೆಗೆ ಸಹಿ ಹಾಕಬಹುದು, ಅದಕ್ಕೆ ಅಂಕಿತ ಹಾಕದೆ ಇರಬಹುದು ಅಥವಾ ಅದನ್ನು ರಾಷ್ಟ್ರಪತಿಯವರ ಪರಿಶೀಲನೆಗೆ ಇರಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.