ADVERTISEMENT

ಆಯುಷ್ ವೈದ್ಯರ ನಿವೃತ್ತಿ ವಯಸ್ಸು ಪ್ರಕರಣ: ವಿಸ್ತೃತ ಪೀಠಕ್ಕೆ ವರ್ಗ

ಪಿಟಿಐ
Published 20 ಅಕ್ಟೋಬರ್ 2025, 14:01 IST
Last Updated 20 ಅಕ್ಟೋಬರ್ 2025, 14:01 IST
   

ನವದೆಹಲಿ: ಅಲೋಪಥಿ ವೈದ್ಯರು ಹಾಗೂ ದೇಸಿ ವೈದ್ಯಕೀಯ ಪದ್ಧತಿಯ (ಆಯುರ್ವೇದ, ಯುನಾನಿ, ಹೋಮಿಯೊಪಥಿ) ವೈದ್ಯರ ನಡುವಿನ ಸಮಾನತೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಪ್ರಶ್ನೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌, ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸಿದೆ. 

ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಲೋಪಥಿ ಹಾಗೂ ಆಯುರ್ವೇದ ವೈದ್ಯರಿಗೆ ನಿವೃತ್ತಿ ವಯಸ್ಸು ಬೇರೆ ಬೇರೆ ಇರಬಹುದೇ ಎಂದು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ, ನ್ಯಾಯಮೂರ್ತಿ ಕೆ.ವಿನೋದ್‌ ಚಂದ್ರನ್‌ ಅವರ ಪೀಠವು ಮೇ 13ರಂದು ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿತ್ತು.

ಬಳಿಕ, ಅಕ್ಟೋಬರ್‌ 17ರಂದು ನೀಡಿದ ಆದೇಶದಲ್ಲಿ, ‘ಎರಡೂ ವೈದ್ಯಕೀಯ ಪದ್ಧತಿಗಳ ವೈದ್ಯರನ್ನು ಸೇವಾ ಸೌಲಭ್ಯಗಳಲ್ಲಿ ಒಂದೇ ರೀತಿ ಪರಿಗಣಿಸಬಹುದೇ ಎಂಬುದರ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಬಗ್ಗೆ ಒಂದು ಸ್ಪಷ್ಟ ತೀರ್ಮಾನಕ್ಕೆ ಬರಬೇಕಿದೆ’ ಎಂದು ನ್ಯಾಯಪೀಠ ಹೇಳಿದೆ. 

ADVERTISEMENT

‘ಸಾರ್ವಜನಿಕರಿಗೆ ಚಿಕಿತ್ಸೆ ಒದಗಿಸಲು ಅನುಭವಿ ವೈದ್ಯರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಮಾತ್ರ ಅಲೋಪಥಿ ವೈದ್ಯರ ನಿವೃತ್ತಿ ವಯಸ್ಸನ್ನು ಹೆಚ್ಚಿಸಲಾಗಿದೆ ಎಂದು ರಾಜ್ಯಗಳು ಹೇಳಿವೆ. ಈ ವಾದವನ್ನೂ ತಳ್ಳಿ ಹಾಕಲಾಗದು. ಜತೆಗೆ ಅಲೋಪಥಿಯಲ್ಲಿರುವ ವೈದ್ಯರ ಕೊರತೆ ಸಮಸ್ಯೆಯು ಆಯುರ್ವೇದ ವ್ಯವಸ್ಥೆಯಲ್ಲಿ ಇಲ್ಲ. ಈ ಎಲ್ಲಾ ಆಯಾಮಗಳನ್ನೂ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕಿರುವ ಕಾರಣ, ಈ ವಿಚಾರವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುತ್ತಿದ್ದೇವೆ’ ಎಂದೂ ನ್ಯಾಯಪೀಠ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.