ನವದೆಹಲಿ: ವಂಚನೆ ಆರೋಪದಡಿ ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಎಚ್‌ಡಿಎಫ್‌ಸಿ ಬ್ಯಾಂಕ್ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಜಗದೀಶನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿತು.
ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಹಾಗೂ ಆರ್.ಮಹಾದೇವನ್ ಅವರು ಇದ್ದ ನ್ಯಾಯಪೀಠ, ಬಾಂಬೆ ಹೈಕೋರ್ಟ್‌ಗೆ ಪುನಃ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿತು.
ಶಶಿಧರ ಜಗದೀಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಜುಲೈ 14ರಂದು ನಿಗದಿ ಮಾಡಿದೆ.
‘ನಾನು ಪ್ರತಿಷ್ಠಿತ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕನಾಗಿದ್ದು, ನನಗೂ ಈ ವಂಚನೆ ಪ್ರಕರಣಕ್ಖೂ ಸಂಬಂಧವೇ ಇಲ್ಲ. ಟ್ರಸ್ಟಿಗಳ ನಡುವಿನ ವೈಯಕ್ತಿಕ ವ್ಯಾಜ್ಯದ ಕಾರಣದಿಂದಾಗಿ ನನ್ನ ವಿರುದ್ಧ ಕ್ಷುಲ್ಲಕ ಎಫ್‌ಐಆರ್ ದಾಖಲಿಸಲಾಗಿದೆ. ಒಂದೆಡೆ ಬ್ಯಾಂಕಿಗೆ ತೊಂದರೆಯಾಗುತ್ತಿದ್ದರೆ, ಮತ್ತೊಂದೆಡೆ ನನಗೆ ಕಿರುಕುಳ ನೀಡಲಾಗುತ್ತಿದೆ’ ಎಂದು ಶಶಿಧರ ಅವರು ಮೇಲ್ಮನವಿಯಲ್ಲಿ ವಿವರಿಸಿದ್ದಾರೆ.
ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ, ‘ಬಾಂಬೆ ಹೈಕೋರ್ಟ್ ಅರ್ಜಿ ವಿಚಾರಣೆ ಪೂರ್ಣಗೊಳಿಸುವವರೆಗೆ ನನ್ನ ಕಕ್ಷಿದಾರನಿಗೆ ಬಲವಂತದ ಕ್ರಮದಿಂದ ಮಧ್ಯಂತರ ರಕ್ಷಣೆ ನೀಡಬೇಕು’ ಎಂದು ಪೀಠಕ್ಕೆ ಮನವಿ ಮಾಡಿದರು.
ದೂರುದಾರರ ಪರ ಹಾಜರಿದ್ದ ವಕೀಲ ಅಭಿಷೇಕ್ ಮನು ಸಿಂಘ್ವಿ,‘ಎರಡೂ ಕಡೆಯವರ ಒಪ್ಪಿಗೆ ಮೇರೆಗೆ, ಬಾಂಬೆ ಹೈಕೋರ್ಟ್ ವಿಚಾರಣೆಯನ್ನು ಜುಲೈ 14ಕ್ಕೆ ನಿಗದಿ ಮಾಡಿದೆ’ ಎಂದು ಪೀಠದ ಗಮನಕ್ಕೆ ತಂದರು.
‘ನಿಮ್ಮ ಪರಿಸ್ಥಿತಿ ಬಗ್ಗೆ ಸಹಾನುಭೂತಿ ಇದೆ. ಹಲವು ನ್ಯಾಯಪೀಠಗಳು ವಿಚಾರಣೆಯಿಂದ ಹಿಂದೆ ಸರಿದಿದ್ದು, ನಿಮ್ಮ ಅರ್ಜಿಯನ್ನು ಪದೇಪದೇ ವಿಚಾರಣಾ ಪಟ್ಟಿಗೆ ಸೇರಿಸಲಾಗುತ್ತಿದೆ. ಈಗ, ಜುಲೈ 14ರಂದು ವಿಚಾರಣೆ ನಿಗದಿಯಾಗಿರುವ ಕಾರಣ, ಈ ಹಂತದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸುವುದು ಸರಿಯಲ್ಲ’ ಎಂದು ಹೇಳಿದ ಪೀಠ, ಅರ್ಜಿ ವಿಲೇವಾರಿ ಮಾಡಿತು.
ಮುಂಬೈನ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆ ನಡೆಸುತ್ತಿರುವ ಲೀಲಾವತಿ ಕೀರ್ತಿಲಾಲ್ ಮೆಹ್ತಾ ಟ್ರಸ್ಟ್ ನೀಡಿರುವ ದೂರಿನ ಆಧಾರದಲ್ಲಿ ಶಶಿಧರ ಜಗಿದೀಶನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.