ADVERTISEMENT

‘ಕಫೀಲ್ ಖಾನ್ ಬಿಡುಗಡೆ: ಹೈಕೋರ್ಟ್‌ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ’

ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಹೇಳಿಕೆ

ಪಿಟಿಐ
Published 17 ಡಿಸೆಂಬರ್ 2020, 13:11 IST
Last Updated 17 ಡಿಸೆಂಬರ್ 2020, 13:11 IST
ಕಫೀಲ್‌ ಖಾನ್‌
ಕಫೀಲ್‌ ಖಾನ್‌   

ನವದೆಹಲಿ: ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಡಾ.ಕಫೀಲ್‌ ಖಾನ್‌ ಅವರ ಮೇಲಿದ್ದ ಪ್ರಕರಣ ರದ್ದುಗೊಳಿಸಿ, ತಕ್ಷಣವೇ ಅವರ ಬಿಡುಗಡೆಗೆ ಆದೇಶಿಸಿದ್ದ ಅಲಹಾಬಾದ್‌ ಹೈಕೋರ್ಟ್‌ ಆದೇಶ ಕುರಿತಂತೆ ಮಧ್ಯಪ್ರವೇಶಿಸುವುದನ್ನು ಸುಪ್ರೀಂ ಕೋರ್ಟ್‌ ಗುರುವಾರ ತಳ್ಳಿಹಾಕಿದೆ.

ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌.ಭೋಪಣ್ಣ, ವಿ.ರಾಮಸುಬ್ರಮಣಿಯನ್‌ ಅವರಿದ್ದ ಪೀಠವು, ‘ಇದೊಂದು ಉತ್ತಮ ತೀರ್ಪು’ ಎಂದು ತಿಳಿಸಿದೆ.

ರಾಜ್ಯ ಸರ್ಕಾರದ ಪರ ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ತೀರ್ಪು ಅಪರಾಧ ಪ್ರಕ್ರಿಯೆಯಲ್ಲಿ ಖಾನ್‌ ಅವರನ್ನು ನಿರಪರಾಧಿಯನ್ನಾಗಿಸುತ್ತಿದೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ಕ್ರಿಮಿನಲ್‌ ಪ್ರಕರಣಗಳನ್ನು ಅವುಗಳ ವಾಸ್ತವಿಕ ಸರಿತಪ್ಪುಗಳ ಆಧಾರದಲ್ಲಿಯೇ ನಿರ್ಧರಿಸಲಾಗುತ್ತದೆ’ ಎಂದು ಹೇಳಿತು.

ADVERTISEMENT

ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (ಎಎಂಯು) ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಪ್ರಚೋದನಾತ್ಮಕ ಭಾಷಣವನ್ನು ಮಾಡಿದ್ದಾರೆ ಎಂಬ ಆರೋಪದಡಿ ಕಫೀಲ್‌ ಅವರನ್ನು ಮುಂಬೈನಲ್ಲಿ ಕಳೆದ ಜನವರಿಯಲ್ಲಿ ಬಂಧಿಸಲಾಗಿತ್ತು.

‘ಖಾನ್‌ ಅವರ ಭಾಷಣದ ಕೆಲ ಅಂಶಗಳನ್ನಷ್ಟೇ ಓದಿ, ಅವರ ಮಾತಿನ ಉದ್ದೇಶ ನಿರ್ಲಕ್ಷಿಸಿ ಅಲಿಗಡ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಖಾನ್‌ ಬಂಧನಕ್ಕೆ ಆದೇಶಿಸಿದ್ದರು. ಅವರ ಮಾತಿನಲ್ಲಿ ದ್ವೇಷ, ಹಿಂಸೆ ಪ್ರಚೋದಿಸುವ ಅಂಶಗಳು ಇರಲಿಲ್ಲ’ ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.